ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ

Drunken Man
Published on

ಹರಿಪಾದ: ಯೋಧನೊಬ್ಬ ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಪ್ರಕರಣವನ್ನು ಇಂಟಿಲಿಜೆನ್ಸ್​ ಬ್ಯೂರೋ (ಐಬಿ) ತನಿಖೆ ನಡೆಸಲಿದೆ. ಸದ್ಯ ಯೋಧನನ್ನು ಕೇರಳ ಪೊಲೀಸರು ಬಂಧಿಸಿದ್ದು, ಹರಿಪಾದದ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ವಶಕ್ಕೆ ನೀಡಲಾಗಿದೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಬಂಧಿತ ಯೋಧನನ್ನು ಅಲಕೊಟ್ಟಿಲ್​ ಸುಬೋಧ್​ (37) ಎಂದು ಗುರುತಿಸಲಾಗಿದೆ. ಕರೀಲಾಕುಲಂಗರ ಪೊಲೀಸ್​ ಠಾಣೆಯಿಂದ ಐಬಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಫ್​ಐಆರ್​ ಅನ್ನು ಶೀಘ್ರದಲ್ಲೇ ಆರ್ಮಿಗೆ ಹಸ್ತಾಂತರ ಮಾಡಲಾವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಮಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸುಬೋಧ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಆರೋಪಿ ಸುಬೋಧ್​ ತನ್ನ 69 ವರ್ಷದ ತಾಯಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ತಾಯಿಯನ್ನು ಎಳೆದಾಡಿ, ಆಕೆಯನ್ನು ಕೆಳಕ್ಕೆ ನೂಕಿ, ಕಾಲಿನಿಂದು ಒದ್ದು ಕೆಟ್ಟ ಬೈಗುಳಗಳಿಂದ ನಿಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಸಹಾಯಕ್ಕಾಗಿ ತನ್ನ ಹಿರಿಯ ಮಗನ ಹೆಸರನ್ನು ಕೂಗಿದರೆ, ಅದನ್ನು ವ್ಯಂಗ್ಯವಾಡಿಕೊಂಡು ತಾಯಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ.

ಈ ಘಟನೆ ಬುಧವಾರ (ಜ.12) ನಡೆದಿದೆ. ಆರೋಪಿ ಸುಬೋಧ್​ ಮದ್ಯದ ಅಮಲಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ಪೊಲೀಸರು ಮನೆಗೆ ಬಂದಾಗಲೂ ತಾಯಿಯು ತನ್ನ ತಾಯ್ತನವನ್ನು ಪ್ರದರ್ಶಿಸಿದ್ದಾಳೆ. ಮಗನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ದೂರು ನೀಡಲು ಹಿಂಜರಿದಿದ್ದಾಳೆ. ಮಗನನ್ನು ಕರೆದುಕೊಂಡು ಹೋದರೆ ನಾನು ಕೂಡ ಜೊತೆಯಾಗುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿ ಎಳೆದೊಯ್ದಾಗಲು ಆತ ಮದ್ಯದ ಅಮಲಿನಲ್ಲೇ ಇದ್ದ. ಬೆಂಗಳೂರಿನಲ್ಲಿ ಟ್ರೇಡ್‌ಮ್ಯಾನ್ ಆಗಿರುವ ಸುಬೋಧ್ ಮೂರು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು. ಒಂದು ವರ್ಷದ ಹಿಂದಷ್ಟೇ ಕಾರ್ತಿಕಪಲ್ಲಿ ಜಂಕ್ಷನ್‌ನಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net