ಒಟ್ಟಿಗೆ ಯುವತಿಯರಿಬ್ಬರನ್ನೂ ಮದ್ವೆಯಾದ ಯುವಕ: ಈತನ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ!

Marriage
Published on

ರಾಂಚಿ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಒಂದೇ ಗ್ರಾಮದ ಇಬ್ಬರು ಯುವತಿಯರನ್ನು ಒಂದೇ ಸಮಯದಲ್ಲಿ ಒಟ್ಟಿಗೆ ಮದುವೆಯಾಗಿದ್ದಾನೆ. ಈ ವಿನೂತನ ವಿವಾಹಕ್ಕೆ ಜಾರ್ಖಂಡ್​ನ ಲೊಹರ್ದಾಗದಲ್ಲಿರುವ ಬಾಂದಾ ಗ್ರಾಮ ಸಾಕ್ಷಿಯಾಗಿದೆ.

ಮೂವರು ಕೂಡ ಪರಸ್ಪರ ಒಪ್ಪಿ ಮದುವೆಯಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಯುವತಿಯರ ಹೆಸರು ಕುಸುಮ್​ ಲಾಕ್ರ ಮತ್ತು ಸ್ವಾತಿ ಕುಮಾರಿ. ಯುವಕನ ಹೆಸರು ಸಂದೀಪ್​ ಒರೋನ್​. ಮೂವರು ಕೂಡ ತಾವು ಒಪ್ಪಿ, ಹಿರಿಯರನ್ನು ಒಪ್ಪಿಸಿ ಒಂದೇ ಸಮಯದಲ್ಲಿ ಒಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೆ ಸಂದೀಪ್​ ಮತ್ತು ಕುಸುಮ್​ ಮೂರು ವರ್ಷಗಳ ಕಾಲ ಲಿವ್​ ಇನ್​ ರಿಲೇಶನ್​ನಲ್ಲಿದ್ದರು. ಇಬ್ಬರಿಗೂ ಒಂದು ಮಗು ಸಹ ಇದೆ. ಒಂದು ವರ್ಷದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಇಟ್ಟಿಗೆ ಕೆಲಸ ಮಾಡಲು ಸಂದೀಪ್​ ತೆರಳಿದಾಗ ಇವರಿಬ್ಬರ ಲವ್​ ಸ್ಟೋರಿ ಒಂದು ತಿರುವು ಪಡೆದುಕೊಂಡಿತು.

ಸಂದೀಪ್​​ ಇಟ್ಟಿಗೆ ಕೆಲಸ ಮಾಡುವಾಗ ಅದೇ ಕೆಲಸಕ್ಕೆ ಬಂದಿದ್ದ ಸ್ವಾತಿ ಕುಮಾರಿ ಎಂಬಾಕೆಯ ಭೇಟಿಯಾಗಿದೆ. ಭೇಟಿ ಪರಿಚಯಕ್ಕೆ ತಿರುಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೆಲಸ ಮುಗಿಸಿ ಮನೆಗೆ ಮರಳಿ ಬಂದಾಗಲೂ ಸಂದೀಪ್​ ಮತ್ತು ಸ್ವಾತಿ ಭೇಟಿ ಮುಂದುವರಿದಿದೆ. ಕೊನೆಗೆ ಇಬ್ಬರ ಪ್ರೀತಿಯ ವಿಚಾರ ಅವರವರ ಮನೆಗೆ ತಿಳಿದು ಅವರು ವಿರೋಧಿಸಿದ್ದಾರೆ.

ಇದರ ನಡುವೆ ಸರಣಿ ಜಗಳಗಳು ನಡೆದಿವೆ. ಗ್ರಾಮಸ್ಥರು ಪಂಚಾಯತಿಗೆ ಕರೆದರು ತೀರ್ಮಾನ ಮಾಡಿದಾಗ ಸಂದೀಪ್ ಇಬ್ಬರೂ ಮಹಿಳೆಯರನ್ನು ಮದುವೆಯಾಗಲು ನಿರ್ಧರಿಸಿದ. ಆದರೆ, ಇದಕ್ಕೆ ಯುವತಿಯರಾಗಲಿ ಅಥವಾ ಕುಟುಂಬದವರಾಗಲಿ ವಿರೋಧಿಸಲಿಲ್ಲ. ಇದಾದ ಬಳಿಕ ಇಬ್ಬರನ್ನು ಸಂದೀಪ್​ ವರಿಸಿದ್ದಾನೆ.

ಇಬ್ಬರು ಮಹಿಳೆಯರನ್ನು ಒಟ್ಟಿಗೆ ಮದುವೆಯಾಗಲು ಕಾನೂನಿನ ಸಮಸ್ಯೆ ಇರಬಹುದು, ಆದರೆ ನಾನು ಅವರಿಬ್ಬರನ್ನೂ ಪ್ರೀತಿಸುತ್ತೇನೆ. ಇಬ್ಬರನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಹೀಗಾಗಿ ಇಬ್ಬರನ್ನು ಮದುವೆ ಆಗಿದ್ದೇನೆ ಎಂದು ಸಂದೀಪ್​ ತಿಳಿಸಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net