

ಹೈದರಾಬಾದ್: ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್ ಆರ್ಟಿಸ್ಟ್ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ನನ್ನು ಹೈದರಾಬಾದ್ನ ಸರೋರ್ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಧೀರ್ (31) ಎಂದು ಗುರುತಿಸಲಾಗಿದೆ. ಈತ ಕರೊನಾ ಲಾಕ್ಡೌನ್ ಸಮಯದಲ್ಲಿ ರಹಸ್ಯವಾಗಿ ದಂಧೆ ನಡೆಸುತ್ತಿದ್ದ. ಯುವಕರನ್ನು ಸೆಳೆಯಲು ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಫೋಟೋ ಹಾಕುತ್ತಿದ್ದ ಎಂದು ತಿಳಿದುಬಂದಿದೆ.
ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ಮೂಲದ ಸುಧೀರ್, 10 ವರ್ಷಗಳ ಹಿಂದೆ ಹೈದರಾಬಾದ್ಗೆ ಬಂದು ಮಧಪುರ್ನಲ್ಲಿ ನೆಲೆಸಿದರು. ಸಿನಿಮಾ ಪ್ರೊಡಕ್ಷನ್ನಲ್ಲಿ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಿರುವ ಸುಧೀರ್, ತನಗೆ ಪರಿಚಯವಿದ್ದ ಕಿರಿಯ ಕಲಾವಿದರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲು ಶುರು ಮಾಡಿದನು.
ದಂಧೆ ನಡೆಸಲೆಂದೇ ಮಧಪುರ್ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಯುವಕರನ್ನು ಸೆಳೆಯಲೆಂದೇ ಲೊಕೆಂಟೋ ಡೇಟಿಂಗ್ ವೆಬ್ಸೈಟ್ನಲ್ಲಿ ಹುಡುಗಿಯರ ಅರೆಬೆತ್ತಲೇ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ. ಫೋನ್ ಮೂಲಕ ಸಂಪರ್ಕಿಸಿ ವ್ಯವಹಾರ ನಡೆಸುತ್ತಿದ್ದ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ರಾಚಕೊಂಡ ಮಾನವ ಕಳ್ಳಸಾಗಾಣೆ ವಿರೋಧಿ ಘಟಕ (ಎಎಚ್ಟಿಯು)ದ ಪೊಲೀಸರು ಸರೋರ್ ನಗರ ಠಾಣೆಗೆ ಮಾಹಿತಿ ನೀಡಿ ಸುಧೀರ್ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)