ಹೈದರಾಬಾದ್​ ಗ್ಯಾಂಗ್​ರೇಪ್​ ಕೇಸ್​: MLA ಪುತ್ರ ಸೇರಿದಂತೆ ನಾಲ್ವರು ಅಪ್ರಾಪ್ತ ಆರೋಪಿಗಳಿಗೆ ಜಾಮೀನು ಮಂಜೂರು

MLA Car
Published on

ಹೈದರಾಬಾದ್​: ಕಳೆದ ಮೇ ತಿಂಗಳ ಅಂತ್ಯದಲ್ಲಿ ನಡೆದ ಹೈದರಾಬಾದ್​ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದ್ದು, ನಾಲ್ವರು ಅಪ್ರಾಪ್ತ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಈ ಗ್ಯಾಂಗ್​ರೇಪ್​ ಪ್ರಕರಣ ತೆಲಂಗಾಣದಲ್ಲಿ ಭಾರೀ ಸದ್ದು ಮಾಡಿತ್ತು, ರಾಜಕಾರಣಿಗಳ ಮಕ್ಕಳೇ ಇದರಲ್ಲಿ ಭಾಗಿಯಾಗಿದ್ದಾರೆಂದು ಕೇಳಿಬಂದಿದೆ.

ಶಾಸಕರೊಬ್ಬರ ಪುತ್ರನು ಸೇರಿದಂತೆ ಎಲ್ಲ ನಾಲ್ವರು ಅಪ್ರಾಪ್ತರಿಗೆ ಜಾಮೀನು ದೊರೆತಿದೆ. ಬಾಲಾಪರಾಧಿ ಕೇಂದ್ರದಲ್ಲಿದ್ದ ನಾಲ್ವರು ಆರೋಪಿಗಳು ಇದೀಗ ಬಂಧಮುಕ್ತರಾಗಿದ್ದಾರೆ. ಐದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಮ್ ಜುವೆನೈಲ್ ಜಸ್ಟೀಸ್ ಬೋರ್ಡ್ ಮಂಗಳವಾರ ಜಾಮೀನು ಆದೇಶಗಳನ್ನು ಹೊರಡಿಸಿದೆ.

ಐದನೇ ಅಪ್ರಾಪ್ತ ಆರೋಪಿ ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿರುವುದರಿಂದ ಬಾಲಾಪರಾಧಿಗೃಹದಲ್ಲಿಯೇ ಉಳಿದುಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಏಕೈಕ ವಯಸ್ಕ ಆರೋಪಿ ಸಾದುದ್ದೀನ್ ಮಲ್ಲಿಕ್‌ನನ್ನು ಚಂಚಲಗುಡ ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು.

ಘಟನೆ ಹಿನ್ನೆಲೆ ಏನು?

ಈ ಘಟನೆ ಮೇ 28ರಂದು ನಡೆಯಿತು. ಅಂದು 17 ವರ್ಷದ ಅಪ್ರಾಪ್ತೆ ಪಾರ್ಟಿಗೆಂದು ಪಬ್​ಗೆ ಹೋಗಿದ್ದಳು. ಈ ವೇಳೆ ಹುಡುಗನೊಬ್ಬನನ್ನು ಆಕೆಯನ್ನು ಭೇಟಿಯಾಗಿದ್ದಳು. ಪಾರ್ಟಿಯ ಬಳಿಕ ಪರಿಚಿತ ಹುಡುಗ ಮತ್ತು ಆತನ ಸ್ನೇಹಿತರೊಂದಿಗೆ ಕ್ಲಬ್​ನಿಂದ ಹೊರಬಂದಿದ್ದಳು. ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್​ ಮಾಡುತ್ತೇನೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಹುಡುಗಿ ಮರ್ಸಿಡೆಸ್​ ಬೆಂಜ್​ ಕಾರಿನಲ್ಲಿ ಹೋಗಿದ್ದಳು.

ಕಾರಿನಲ್ಲಿ ಹೋಗುವಾಗ ಹತ್ತಿರದ ಕೆಫೆ ಬಳಿ ಮೇ.28ರಂದು ಸಂಜೆ 6.30ಕ್ಕೆ ಇನ್ನೋವಾ ಕಾರಿಗೆ ಎಲ್ಲರು ಸ್ಥಳಾಂತರವಾಗಿದ್ದಾರೆ. ಬಳಿಕ ಆಕೆಯನ್ನು ರಸ್ತೆ ನಂಬರ್​ 44ರಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾತ್ರಿ 7.30ರ ಸುಮಾರಿಗೆ ಆಕೆಯನ್ನು ಮತ್ತೆ ಪಬ್‌ಗೆ ಬಿಟ್ಟಿದ್ದಾರೆ. ಘಟನೆ ನಡೆದ ಪ್ರದೇಶವು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾಗಿದ್ದು, ಅಲ್ಲಿ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು, ನಟರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ.

ಈ ಘಟನೆ ನಡೆದ ಒಂದು ವಾರದ ಬಳಿಕ ಸಂತ್ರಸ್ತೆಯ ತಂದೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅತ್ಯಾಚಾರ ಎಸಗಲು ಬಳಸಿದ ಕಾರು ಶಾಸಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಅಲ್ಲದೆ, ತೆಲಂಗಾಣದ ಗೃಹಸಚಿವ ಮಹ್ಮೂದ್​ ಅಲಿ ಅವರ ಮೊಮ್ಮಗನ ವಿರುದ್ಧ ಆರೋಪ ಕೇಳಿಬಂದಿತ್ತು. ಇದೀಗ ಈ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ದೊರೆತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net