More

    ಪತ್ನಿಗೆ ಕರೆ​ ಮಾಡಿದಾಗಲೆಲ್ಲ ಕೇಳಿ ಬರ್ತಿದ್ದ ಒಂದೇ ಮಾತಿಂದ ಸೈಕೋ ಆದ ಗಂಡ: ನಡೆದೇ ಹೋಯ್ತು ಭೀಕರ ಕೃತ್ಯ!

    ಕನ್ಯಾಕುಮಾರಿ: ಪತ್ನಿ ಸದಾ ಮೊಬೈಲ್​ನಲ್ಲಿ ಬಿಜಿ ಆಗಿರುವುದನ್ನು ನೋಡಿ ಅನುಮಾನಗೊಂಡ ಪತಿ ಮಹಾಶಯನೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವೆಲ್ಲಿಚಂದೈ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಉಮಾ ಕೊಲೆಯಾದ ಮಹಿಳೆ. ರಮೇಶ್​ (42) ಆರೋಪಿ ಪತಿ. ದಂಪತಿಗೆ 11 ವರ್ಷದ ಮಗ ಮತ್ತು 9 ವರ್ಷದ ಮಗಳಿದ್ದಾಳೆ. ರಮೇಶ್​ ದ್ವಿಚಕ್ರ ವಾಹನಗಳಿಗೆ ಸೀಟ್​ ಕವರ್​ ತಯಾರಿಸುವ ಕೆಲಸ ಮಾಡುತ್ತಿದ್ದಾನೆ. ಉಮಾ ಟೈಲರಿಂಗ್​ ಕಲಿತು ಕೆಲಸದಲ್ಲಿ ತೊಡಗಿಕೊಂಡಿದ್ದಳು.

    ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಬಟ್ಟೆ ಹೊಲಿಯುವುದೇ ಉಮಾರ ನೆಚ್ಚಿನ ಕಸುಬು ಆಗಿತ್ತು. ಗ್ರಾಹಕರೊಂದಿಗೆ ಮಾತನಾಡುವುದು, ವಾಟ್ಸ್​ಆ್ಯಪ್​ ಮೂಲಕ ಹೊಸ ಹೊಸ ಡಿಸೈನ್​ಗಳನ್ನು ಕಳುಹಿಸಿ ಅವರಿಂದ ಅನುಮತಿ ಪಡೆದುಕೊಳ್ಳುವುದು ಮಾಡುತ್ತಿದ್ದಳು. ತನಗೆ ಬೇಕಾದ ಡಿಸೈನ್​ಗಳನ್ನು ಯೂಟ್ಯೂಬ್​ನಲ್ಲಿ ಹುಡುಕುವ ಅಭ್ಯಾಸವನ್ನು ಉಮಾ ಬೆಳೆಸಿಕೊಂಡಿದ್ದಳು.

    ಇತ್ತ ಅಂಗಡಿಯಲ್ಲಿ ಇದ್ದಾಗಲೆಲ್ಲ ರಮೇಶ್​, ಉಮಾ ಜತೆಯಲ್ಲಿ ಮಾತನಾಡಲು ಫೋನ್​ ಮಾಡುತ್ತಿದ್ದ. ಆದರೆ, ಬಹುತೇಕ ಸಮಯದಲ್ಲಿ “ನೀವು ಕರೆ ಮಾಡಿರುವ ಚಂದದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ” ಎಂಬ ಮಾತೊಂದೇ ಕೇಳಿಬರುತ್ತಿತ್ತು.

    ಪದೇಪದೆ ಈ ಮಾತನ್ನು ಕೇಳುತ್ತಿದ್ದ ರಮೇಶ್​, ಪತ್ನಿ ಉಮಾ ಮೇಲೆ ಅನುಮಾನ ಪಡಲು ಆರಂಭಿಸಿದ. ಬೇರೋಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿರಬಹುದು ಅಂದುಕೊಂಡು. ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಟೈಲರ್​ಗಳು ಅವಳ ಮನೆಗೆ ಬಂದು ಹೋಗುತ್ತಿದ್ದರು. ಅದರಲ್ಲಿ ಪುರುಷ ಟೈಲರ್​​ಗಳು ಸೇರಿಕೊಂಡಿದ್ದರು. ಇದರಿಂದ ಆಕೆಗೆ ಕಿರುಕುಳ ನೀಡಲು ರಮೇಶ್​ ಆರಂಭಿಸಿದ.

    ಗಲಾಟೆ ನಡೆದಾಗ ಉಮಾ ಮನೆಯವರು ಬಂದು ಕೌಟುಂಬಿಕ ವಿವಾದವನ್ನು ಇತ್ಯರ್ಥಪಡಿಸಿ ಹೋಗಿದ್ದರು. ರಮೇಶ್​ಗೆ ಆಪ್ತ ಸಮಾಲೋಚನೆಯನ್ನು ಸಹ ನೀಡಿದ್ದರು. ಆದರೆ, ಪತ್ನಿಯ ಫೋನ್​ ಸದಾ ಬಿಜಿಯಾಗಿರುತ್ತಿದ್ದನ್ನು ನೋಡುತ್ತಿದ್ದ ರಮೇಶ್​ಗೆ ಅನುಮಾನ ಹೋಗಲೇ ಇಲ್ಲ. ಆತ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ.

    ಹಾಲು ಮಾರಾಟ ಮಾಡುವವನ ಮೇಲೆಯೂ ರಮೇಶ್​ಗೆ ಅನುಮಾನ ಮೂಡಲು ಆರಂಭಿಸಿತು. ಕೊನೆಗೂ ಗಂಡ ವರ್ತನೆಯಿಂದ ಬೇಸತ್ತ ಉಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋದಳು. ರಮೇಶ್​, ಗ್ರಾಮಸ್ಥರ ಮೂಲಕ ಸಂಧಾನ ಮಾಡಿ ಮತ್ತೆ ಮನೆಗೆ ಕರೆತಂದಿದ್ದ. ಅಂದಿನಿಂದ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಮೇ 16ರಂದು ಎಲ್ಲರು ಮಲಗಿದ್ದ ವೇಳೆ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮಕ್ಕಳಿಗೆ ಎಚ್ಚರವಾಗಿ ನೋಡುತ್ತಿದ್ದಂತೆ ರಮೇಶ್​, ಬೈಕ್​ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.

    ಈ ವಿಚಾರವನ್ನು ಮಕ್ಕಳು ನೆರೆಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಉಮಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಸಹ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಸಿಲ್ವರ್​ ಮಾರ್ಕೆಟ್​ ಸ್ಟೇಷನ್​ನಲ್ಲಿ ದೂರು ದಾಖಲಾಗಿದ್ದು, ಮಕ್ಕಳು ಮತ್ತು ನೆರೆಹೊರೆಯವರನ್ನು ವಿಚಾರಣೆ ನಡೆಸಲಾಗಿದೆ.

    ಇದಾದ ಬಳಿಕ ತನ್ನ ಮಕ್ಕಳಿಗೆ ಕರೆ ಮಾಡಿ ಮಾತನಾಡಿರುವ ರಮೇಶ್​, ಗಲಾಟೆ ಎಲ್ಲ ಇಲ್ಲಿಗೆ ಕೊನೆಯಾಯಿತು. ಫೋನ್​ನಲ್ಲಿ ಸದಾ ಕೇಳಿಬರುತ್ತಿದ್ದ ಎಂಗೇಜ್ಮೆಂಟ್​ ಶಬ್ದ ಇನ್ಮುಂದೆ ಕೇಳಿಬರುವುದಿಲ್ಲ ಎಂದಿದ್ದಾನೆ. ಈ ವಿಚಾರ ಕೇಳಿದ ಸ್ಥಳೀಯರು ಇವನೆಂಥಾ ಹುಚ್ಚು ಮನುಷ್ಯ. ಪತ್ನಿಯ ಬಗ್ಗೆ ವಿಚಾರಿಸದೇ ಹುಚ್ಚನಂತಾಗಿ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ ಎಂದು ಜರಿದಿದ್ದಾರೆ. (ಏಜೆನ್ಸೀಸ್​)

    ಲಾಕ್​ಡೌನ್​ ನಡುವೆಯೂ ನಡೆಯಿತು ಅದ್ಧೂರಿ ಮದುವೆ: ಕರೊನಾ ಪ್ರಕರಣಗಳಿದ್ರೂ ಡೋಂಟ್​ ಕೇರ್​

    ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

    ಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ: 4.5 ಮಿಲಿಯನ್​ ಗ್ರಾಹಕರ ದತ್ತಾಂಶ ಸೋರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts