ವಿಜಯವಾಡ: ಹೆಂಡತಿ-ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕು ಅಂತ ಕುಟುಂಬವನ್ನು ತೊರೆದು ಉದ್ಯೋಗಕ್ಕಾಗಿ ಕೆಲವರು ಹೊರ ದೇಶಗಳಿಗೆ ತೆರಳುತ್ತಾರೆ. ಕುಟುಂಬಕ್ಕಾಗಿ ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತಾರೆ. ತಮಗಾಗಿ ಇಷ್ಟೆಲ್ಲ ಕಷ್ಟಪಡುತ್ತಿರುವ ಪತಿಗಾಗಿ ಮಿಡಿಯಬೇಕಾದ ಪತ್ನಿಯ ಹೃದಯ, ಬೇರೆಯೊಬ್ಬರಿಗೆ ಮಿಡಿದು, ಕೊನೆಗೆ ಅವರಿಂದಲೇ ದುಂತರ ಅಂತ್ಯ ಕಂಡ ಪ್ರಕರಣವಿದು.
ಗಂಡನ ತ್ಯಾಗವನ್ನು ಅರ್ಥ ಮಾಡಿಕೊಳ್ಳದೆ ಪತ್ನಿ ತನ್ನ ಸುಖವನ್ನೇ ಬಯಸಿದ್ದಳು. ಪತಿ ಕಷ್ಟಪಟ್ಟು ದುಡಿದ ಹಣದಲ್ಲಿ ಎಂಜಾಯ್ ಮಾಡುತ್ತಿದ್ದ ಪತ್ನಿ, ವ್ಯಕ್ತಿಯೊಬ್ಬನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದು ಸಾಲುದು ಅಂತ ಮತ್ತೊಬ್ಬನ ಜತೆಯೂ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮೊದಲ ಪ್ರೇಮಿಗೆ ತಿಳಿದು ಘೋರ ದುರಂತವೇ ಘಟಿಸಿತು.
ಆಂಧ್ರ ಪ್ರದೇಶದ ಅಂಬೇಡ್ಕರ್ ಕೋಣಸೀಮಾ ಜಿಲ್ಲೆಯ ಅಲ್ಲಾವರಂ ಮಂಡಲದ ರೆಳ್ಳುಗಡ್ಡ ಗ್ರಾಮದಲ್ಲಿ ವಿವಾಹಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಯಲ್ಲಿ ಕೆಲವೊಂದು ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ವಿವಾಹಿತ ಮಹಿಳೆಯ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೆಳ್ಳುಗಡ್ಡ ಪ್ರದೇಶದ ಮಣಿಕುಮಾರಿ ಅವರ ಪತಿ ಕಳೆದ ಕೆಲ ದಿನಗಳಿಂದ ಗಲ್ಫ್‌ನಲ್ಲಿ ನೆಲೆಸಿದ್ದಾರೆ. ಮಣಿಕುಮಾರಿ ಮಾತ್ರ ರೆಳ್ಳುಗಡ್ಡಾ ಗ್ರಾಮದಲ್ಲಿ ತನ್ನ ಅತ್ತೆಯೊಂದಿಗೆ ವಾಸವಿದ್ದಳು.
ಈ ವೇಳೆ ಆಕೆಗೆ ಮನೆ ಪಕ್ಕದ ನವೀನ್ ಕುಮಾರ್ ಎಂಬ ಯುವಕನ ಪರಿಚಯವಾಯಿತು. ಅಂತಿಮವಾಗಿ ಇದು ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಕೆಲ ತಿಂಗಳ ಹಿಂದೆ ನವೀನ್ ಮತ್ತು ಮಣಿಕುಮಾರಿ ನಡುವಿನ ಸಂಬಂಧ ಆಕೆಯ ಪತಿಯ ಕುಟುಂಬ ಸದಸ್ಯರಿಗೆ ಗೊತ್ತಾಗಿತ್ತು. ಹೀಗಾಗಿ ಪಂಚಾಯಿತಿ ಮಾಡಿದ್ದರು. ಇನ್ಮುಂದೆ ಬೇರೆ ಬೇರೆಯಾಗಿಯೇ ಇರುತ್ತೇವೆ ಎಂದು ಇಬ್ಬರು ಹೇಳಿದ್ದರು. ಆದರೆ, ಕೆಲ ತಿಂಗಳುಗಳ ಕಾಲ ಸುಮ್ಮನಿದ್ದ ಇಬ್ಬರು ಮತ್ತೆ ತಮ್ಮ ಸಂಬಂಧವನ್ನು ಮುಂದುವರೆಸಿದರು.
ಇದರ ನಡುವೆ ಏನಾಯಿತೋ ಗೊತ್ತಿಲ್ಲ, ಕಳೆದ ಕೆಲವು ದಿನಗಳಿಂದ ಮಣಿಕುಮಾರಿ, ನವೀನ್‌ನನ್ನು ದೂರ ಮಾಡುತ್ತಲೇ ಇದ್ದಳು. ಅವನೊಂದಿಗೆ ಸರಿಯಾಗಿ ಮಾತನಾಡುವುದನ್ನು ನಿಲ್ಲಿಸಿದಳು. ಆಕೆಯ ವರ್ತನೆಯಿಂದ ಅನುಮಾನಗೊಂಡ ನವೀನ್, ಮಣಿಕುಮಾರಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ. ಆಗ ಅವನಿಗೆ ಆಘಾತಕಾರಿ ವಿಷಯ ತಿಳಿಯಿತು. ಮಣಿಕುಮಾರಿ ತನಗೆ ಕೈ ಕೊಟ್ಟಿದ್ದು, ಅದೇ ಗ್ರಾಮದ ಮತ್ತೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾಯಿತು. ಇದರ ಜೊತೆಗೆ ಇನ್ನೊಂದು ವಾರದಲ್ಲಿ ಮಣಿಕುಮಾರಿ, ತನ್ನ ಗಂಡನ ಬಳಿಗೆ ಹೋಗುವುದಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿತು. ಇದರಿಂದ ಕುಪಿತಗೊಂಡ ನವೀನ್, ಮಣಿಕುಮಾರಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ.
ಇದರ ಭಾಗವಾಗಿ ದೌರ್ಜನ್ಯ ನಡೆದ ದಿನ ಬೆಳಗ್ಗೆ 9 ಗಂಟೆಗೆ ನವೀನ್, ಮಣಿಕುಮಾರಿಯ ಮನೆಗೆ ನುಗ್ಗಿ ಬಾತ್ರೂಂನಲ್ಲಿ ಅಡಗಿ ಕುಳಿತು ಆಕೆಯ ಫೋನ್ ಸಂಭಾಷಣೆಗಳನ್ನು ಕದ್ದು ಆಲಿಸಿದ್ದಾನೆ. ಆಕೆ ಬೇರೊಬ್ಬನ ಜತೆ ಲಲ್ಲೆ ಹೊಡೆಯುತ್ತಿರುವುದು ಖಚಿತವಾಗುತ್ತಿದ್ದಂತೆ. ಆಕೆಯ ಮನೆಯಲ್ಲಿದ್ದ ಚಾಕುವಿನಿಂದ ಮೃತಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಣಿಕುಮಾರಿ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಾ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ನವೀನ್ ಹಿಂದಿನಿಂದ ಬಂದು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಮಣಿಕುಮಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ನವೀನ್‌ಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಸ್ಟಾರ್ ನಟಿಯ ಜತೆ ನಾಗಚೈತನ್ಯ ಸುತ್ತಾಟ: ಕೊನೆಗೂ ಫೋಟೋ ಸಮೇತ ಸಿಕ್ಕಿಬಿದ್ದ ಸಮಂತಾ ಮಾಜಿ ಪತಿ
ನೀವಿದನ್ನು ಗಮನಿಸಿದ್ರಾ? ಆರ್ಸಿಬಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಅವಮಾನ, ಫ್ಯಾನ್ಸ್ ಆಕ್ರೋಶ