

| ಉಮೇಶ್ ಕುಮಾರ್ ಶಿಮ್ಲಡ್ಕ
‘‘ಮನೆಯಲ್ಲಿ ಒಬ್ಬಳೇ ಇರೋದಕ್ಕೆ ಬೇಜಾರು ಆಂಟಿ. ಆಟ ಆಡೋದಕ್ಕೆ ಯಾರೂ ಇಲ್ಲ. ಒಬ್ಬ ತಮ್ಮನೋ ತಂಗಿನೋ ಇದ್ದಿದ್ದರೆ ಚೆನ್ನಾಗಿತ್ತು ಅಂತ ಅಮ್ಮನ ಹತ್ರ ಹೇಳಿದೆ. ಬೈದು ಕಳುಹಿಸಿದ್ರು. ಅಜ್ಜಿ ಹತ್ರಾನೂ ಹೇಳಿದೆ. ದೇವರನ್ನು ಬೇಡ್ಕೋ ಅಂದ್ರು...’’ ಆರೇಳು ವರ್ಷದ ಪುಟಾಣಿಯೊಂದು ನೆರೆಮನೆಯಲ್ಲಿರುವ ಒಂದೇ ಮಗುವಿನ ಕುಟುಂಬದವರಿಗೆ ಹೇಳಿದ ಪ್ರಸಂಗ ಇದು. ಒಂದೇ ಹೆಣ್ಣು ಮಗು ಇರುವ ಕುಟುಂಬದಲ್ಲಿ ಇಂತಹ ಪ್ರಸಂಗ ನಡೆದೇ ಇರುತ್ತದೆ. ಈಗ ಕೋವಿಡ್ ಸನ್ನಿವೇಶ ಮಗುವಿನ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿದೆ. ಇದಕ್ಕೆ ಕಾರಣಗಳು ಅನೇಕ.
ಇನ್ನು ಒಂದೇ ಗಂಡು ಮಗು ಇರುವ ಕುಟುಂಬವನ್ನು ಗಮನಿಸಿದರೆ, ಬಹುತೇಕ ಗಂಡುಮಕ್ಕಳಿಗೆ ತಮ್ಮನೋ ತಂಗಿಯೋ ಬೇಕೆನಿಸುವುದಿಲ್ಲ. ಇದಕ್ಕೆ ಅಪವಾದವೂ ಇದೆ. ಕೆಲವು ಗಂಡು ಮಕ್ಕಳು ತಮ್ಮನೋ ತಂಗಿಯೋ ಬೇಕು ಎಂದು ಅಪ್ಪ-ಅಮ್ಮನ ಬಳಿ ಹೇಳುವುದನ್ನೂ ಕೇಳಬಹುದು. ಆದರೆ, ಬಹುತೇಕ ಸನ್ನಿವೇಶಗಳಲ್ಲಿ ಗಂಡು ಮಗುವಿಗೆ ಸ್ನೇಹಿತರು ಬೇಕೆನಿಸುತ್ತದೆ. ಕೋವಿಡ್ ಕಾರಣ ಉಂಟಾದ ಪರಿಸ್ಥಿತಿಯಲ್ಲಿ ಸ್ನೇಹಿತರನ್ನು ಕಂಡಾಗ ಅವರ ಮುಖದಲ್ಲಿ ಮೂಡುವ ಸಂತೋಷ ಭಾವಕ್ಕೆ ಎಣೆಯೇ ಇರುವುದಿಲ್ಲ.
‘‘ಹೇಳಿದ್ದೇ ಕೇಳಲ್ಲ. ಯಾವಾಗ ನೋಡಿದರೂ ಟಿವಿಯಲ್ಲಿ ಕಾರ್ಟೂನ್, ಮೊಬೈಲ್ನಲ್ಲಿ ಯೂಟ್ಯೂಬ್ ನೋಡಿಕೊಂಡು ಕುಳಿತಿರುತ್ತೆ. ಒಂದಕ್ಷರ ಓದಲ್ಲ, ಬರೆಯಲ್ಲ. ಹೀಗಾದರೆ ಮುಂದಿನ ಕ್ಲಾಸ್ನಲ್ಲಿ ಫೇಲಾಗೋದು ಗ್ಯಾರಂಟಿ. ನಂಗಂತೂ ಹೇಳಿ ಹೇಳಿ ಸಾಕಾಯ್ತು’’ ಎಂದು ಅಮ್ಮಂದಿರು ಕೂಗಾಡುವ ಸದ್ದೂ ಸುತ್ತಮುತ್ತಲಿನ ಕೆಲವು ಮನೆಗಳಿಂದ ಕೇಳಿಬರುತ್ತಿರಬಹುದು. ಅಮ್ಮಂದಿರಿಗೂ ಒಂಟಿತನ, ಖಿನ್ನತೆ, ಚಿಂತೆ ಎಲ್ಲವೂ ಕಾಡುತ್ತಿರುತ್ತದೆ ಎಂಬುದಕ್ಕೆ ಇಂತಹ ಬೈಗುಳ ಕೇಳಿದ ಕೂಡಲೇ ಊಹಿಸಿಕೊಳ್ಳಬಹುದು. ಹಾಗಾದರೆ, ನಾಡಿಗೆ ನಾಡೇ ಎದುರಿಸುತ್ತಿರುವ ಕೋವಿಡ್ ಸಂಕಷ್ಟದ ವೇಳೆ ಒಂದೇ ಮಗು ಇರುವಂಥವರು ಮಗುವಿನ ಒಂಟಿತನ, ಬೇಸರ ನಿವಾರಿಸುವುದು ಹೇಗೆ? ಕೆಲವು ಪಾಲಕರನ್ನು ಮಾತನಾಡಿಸಿದ ವೇಳೆ ಅವರು ಹೇಳಿದ ಕೆಲವು ಟಿಪ್ಸ್ ಬೇರೆಯವರಿಗೂ ಅನುಕೂಲವಾಗಲಿ ಎಂಬ ಕಾರಣಕ್ಕೆ ಇಲ್ಲಿ ಪಟ್ಟಿ ಮಾಡಬಹುದು. ಈ ಪಟ್ಟಿ ಓದಿಕೊಂಡು ಮಗುವಿನ ಒಂಟಿತನ ನಿವಾರಿಸಬಹುದು ಎಂಬ ಉದ್ದೇಶ ಅಲ್ಲ. ಆದರೆ, ಮಗುವನ್ನು ಚಟುವಟಿಕೆಯಲ್ಲಿ ಇರಿಸುವುದಕ್ಕೆ ಮತ್ತು ತಾವೂ ಲವಲವಿಕೆಯಿಂದ ಇರುವುದಕ್ಕೆ ಪಾಲಕರಿಗೆ ಇದು ಹೊಸ ಹೊಳಹುಗಳನ್ನು ಕೊಡಬಹುದು.
ಬೇಜಾರಾದಾಗ ವೊಬೈಲ್ ಗೇಮ್ಸ್ ಮತ್ತು ಟಿವಿಯಲ್ಲಿರುವ ಕಾರ್ಟೂನ್ ಷೋಗಳಿಗೆ ಮಗು ಅಡಿಕ್ಟ್ ಆಗುವುದು ಸಹಜ. ಅದನ್ನು ತಪ್ಪಿಸಲು ಮಗುವಿನೊಂದಿಗೆ ಆಟ ಮತ್ತು ಇತರ ಚಟುವಟಿಕೆ ಮಾಡುವುದಕ್ಕೆ ಪಾಲಕರು ಸಮಯ ಮೀಸಲಿಡಬೇಕು. ಮಗುವಿನ ಮನಸ್ಸು ಹೇಗೆ ಎಂಬುದನ್ನು ಅರಿಯುವುದು ಕಷ್ಟ. ರೇಗಿದರೆ, ಕಿರುಚಾಡಿದರೆ ಮಗುವೂ ಅದನ್ನೇ ಕಲಿಯುತ್ತದೆ. ಇದರಿಂದ ಇಬ್ಬರ ಆರೋಗ್ಯವೂ ಹಾಳು. ಕೋವಿಡ್ನ ಈ ಸೂಕ್ಷ್ಮ ಸನ್ನಿವೇಶದಲ್ಲಿ ಮಗುವಿನ ವಿಷಯದಲ್ಲಿ ಪಾಲಕರು ಬಹಳಷ್ಟು ಸಂಯಮ ಪಾಲಿಸಬೇಕು. ಮಗುವಿನ ಆಸಕ್ತಿ ಗಮನಿಸಿ ಅದಕ್ಕೆ ತಕ್ಕಂತೆ ಸ್ಪಂದಿಸುವುದು ಅವಶ್ಯ.
| ಜಯಸಿಂಹ ಪಾಲಕರು, ಬೆಂಗಳೂರು