ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಹಿಂದು ಸಂಘಟನೆಗಳಿಂದ ಹರ್ಷೋದ್ಘಾರ

Ganesha
Published on

ಹುಬ್ಬಳ್ಳಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹೈಕೋರ್ಟ್​ ಅನುಮತಿಯಿಂದ ಖುಷಿಯಾಗಿರುವ ಹಿಂದು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸುವ ಮೂಲಕ ಹರ್ಷೋದ್ಘಾರ ಮೊಳಗಿಸಿದ್ದಾರೆ.

ಈದ್ಗಾ ಮೈದಾನದಲ್ಲಿ ಸಿಂಹಾಸನಾರೂಢ ಗಣೇಶನ ಮೂರ್ತಿಯನ್ನು ಹಿಂದು ಸಂಘಟನೆಗಳು ಪ್ರತಿಷ್ಠಾಪಿಸಿವೆ. ಸುಮಾರು ಮೂರು ಅಡಿ ಎತ್ತರದ ಗಣೇಶ ವಿರಾಜಮಾನನಾಗಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಈ ಮೊದಲು ಮಧ್ಯಾಹ್ನಕ್ಕೆ ಮೂರ್ತಿ ಕೂರಿಸಲು ಸಂಘಟನೆಗಳು ಯೋಜಿಸಿದ್ದವು. ಆದರೆ, ಇಂದು ಬೆಳಗ್ಗೆ 7 ಗಂಟೆಗೆ ಸಾಂಕೇತಿವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಮಧ್ಯಾಹ್ನದ ಬಳಿಕ ದೊಡ್ಡ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಗಣೇಶೋತ್ಸವ ಪರಂಡಾಲದಲ್ಲಿ ವೀರ್ ಸಾವರ್ಕರ್​ಗೆ ಜೈ ಎಂದು ಘೋಷಣೆ ಕೂಗಲಾಯಿತು. ಅಲ್ಲದೆ, ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಘೋಷಣೆ ಮೊಳಗಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶ ದರ್ಶನದ ಬಳಿಕ ಮಾತನಾಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್, ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತು. ನ್ಯಾಯಾಲಯ ಮೂಲಕ ಸಿಹಿ ಸಂಗತಿ ದೊರಕಿತು. ಗಣೇಶ ಪ್ರತಿಷ್ಠಾಪನೆಗೆ ವಿರೋಧಿಸಿದವರಿಗೆ ಕೋರ್ಟ್​ ಛೀಮಾರಿ ಹಾಕಿದೆ ಎಂದರು.

ಈದ್ಗಾ ಮೈದಾನ ಸರಕಾರಕ್ಕೆ ಸೇರಿದೆ. ಇದೊಂದು ಐತಿಹಾಸಿಕ ದಿನ. ನಮ್ಮ ಭಾವನೆಗೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ. ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟೀಷರು ವಿರೋಧ ಮಾಡಲಿಲ್ಲ. ಆದರೆ, ಕಾಂಗ್ರೆಸ್​ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್​ಗೆ ಕಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು ಕೋರ್ಟ್​ ಹೋಗಿ ತಡೆಯಲು ಯತ್ನಿಸುತ್ತಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟುತ್ತದೆ. ನೀವು ಯಾವುದೇ ಕೋರ್ಟ್​ಗೆ ಹೋಗಿ, ಈಗಾಗಲೇ ಪ್ರತಿಷ್ಠಾಪನೆ ಆಗಿದೆ. ಈಗಾಗಲೇ ಗಣೇಶ ಪೂಜೆ ಆಗಿದೆ. ಯಾವ ಶಕ್ತಿಯೂ ಇದನ್ನು ತಡೆಯೋಕೆ ಸಾಧ್ಯವಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net