ಕೀಯೆವ್​ ಭೇಟಿ ನೀಡಿದ ಎರಡೇ ದಿನದಲ್ಲಿ ಕಾಲ್ನಡಿಗೆಯಲ್ಲಿ ಯೂಕ್ರೇನ್​ನಿಂದ ಕಾಲ್ಕಿತ್ತ ಹಾಲಿವುಡ್​ ಸ್ಟಾರ್​ ಸೀನ್​ ಪೆನ್ನ್!​

Sean Penn
Published on

ಕೀಯೆವ್​: ರಷ್ಯಾ ಆಕ್ರಮಣದ ಬಗ್ಗೆ ಸಾಕ್ಷ್ಯಾಚಿತ್ರ ತಯಾರಿಸಲು ಯೂಕ್ರೇನಿಯನ್​ ರಾಜಧಾನಿ ಕೀಯೆವ್​ಗೆ ಭೇಟಿ ನೀಡಿದ್ದ ಹಾಲಿವುಡ್​ ನಟ ಹಾಗೂ ನಿರ್ದೇಶಕ ಸೀನ್​ ಪೆನ್ನ್​​, ತಮ್ಮ ಪ್ರಾಣ ಉಳಿಸಿಕೊಳ್ಳಲು ಕೀಯೆವ್​ಗೆ ಭೇಟಿ ನೀಡಿದ ಎರಡೇ ದಿನದಲ್ಲಿ ಬರಿಗಾಲಲ್ಲಿ ಪೋಲ್ಯಾಂಡ್​ಗೆ ಓಡಿದ್ದಾರೆ.

ಪೋಲ್ಯಾಂಡ್​ಗೆ ತಂಡೋಪತಂಡವಾಗಿ ತೆರಳುತ್ತಿರುವ ಸಾವಿರಾರು ಯೂಕ್ರೇನಿಯನ್ನರ ನಡುವೆ ಸೀನ್​ ಪೆನ್ನ್​​ ಕೂಡ ಒಬ್ಬರಾಗಿದ್ದಾರೆ. 61 ವರ್ಷದ ಪೆನ್ನ್​, ಸೋಮವಾರ ತಮ್ಮ ಟ್ವಿಟರ್​ನಲ್ಲಿ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಫೋಟೋದಲ್ಲಿ ಬ್ಯಾಕ್​ಪ್ಯಾಕ್​ ಧರಿಸಿರುವ ಪೆನ್ನ್​, ಭುಜದಲ್ಲಿ ಸಣ್ಣ ಬ್ಯಾಗ್​ ಒಂದನ್ನು ನೇತು ಹಾಕಿಕೊಂಡು ಲಗೇಜನ್ನು ಎಳೆದುಕೊಂಡು ನಡೆದು ಹೋಗುತ್ತಿರುವ ದೃಶ್ಯವಿದೆ.

ನಾನು ಮತ್ತು ನನ್ನ ಇಬ್ಬರು ಸಹೋದ್ಯೋಗಿಗಳು ರಸ್ತೆಯ ಪಕ್ಕದಲ್ಲಿ ಕಾರನ್ನು ಬಿಟ್ಟು ಪೋಲ್ಯಾಂಡ್​ ಬಾರ್ಡರ್​ ಕಡೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಫೋಟೋದಲ್ಲಿರುವ ಬಹುತೇಕ ಎಲ್ಲ ಕಾರುಗಳು ಮಹಿಳೆಯರು ಮತ್ತು ಮಕ್ಕಳನ್ನು ಮಾತ್ರ ಸಾಗಿಸುತ್ತಿವೆ. ಯಾವುದೇ ಲಗೇಜ್​ ಕೂಡ ಇಲ್ಲ. ಕೇವಲ ಕಾರು ಮಾತ್ರ ಅವರಿಗೆ ಉಳಿದಿರುವ ಒಂದೇ ಒಂದು ಆಸ್ತಿ ಮೌಲ್ಯವಾಗಿದೆ ಎಂದು ಹೇಳಿದ್ದಾರೆ.

ಅಕಾಡೆಮಿ ಪ್ರಶಸ್ತಿ ವಿಜೇತ ನಟ ಮತ್ತು ಅವರ ಸಹಚರರು ತಮ್ಮ ವಾಹನವನ್ನು ತ್ಯಜಿಸಿ ಕಾಲ್ನಡಿಗೆಯಲ್ಲಿ ಸಾಗಲು ಕಾರಣ ಏನೆಂಬುದು ಇನ್ನು ಬಹಿರಂಗವಾಗಿಲ್ಲ. ಟ್ವೀಟ್​ನಲ್ಲೂ ಕೂಡ ಅದನ್ನು ಉಲ್ಲೇಖಿಸಿಲ್ಲ. ಲಾಸ್ ಏಂಜಲೀಸ್‌ನ ವಕ್ತಾರ ಮಾರಾ ಬಕ್ಸ್‌ಬಾಮ್ ಮಂಗಳವಾರ ಇಮೇಲ್ ಮೂಲಕ ಪೆನ್ "ಯೂಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ" ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ಹೇಳಿದರು.

ಅಂದಹಾಗೆ ಪೆನ್ನ್​, ರಷ್ಯಾದ ಆಕ್ರಮಣದ ಮೊದಲ ದಿನ ಹಾಗೂ ಳೆದ ಗುರುವಾರ ಕೀಯೆವ್​ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು, ಬಿಕ್ಕಟ್ಟನ್ನು ವಿವರಿಸುವ ಸಾಕ್ಷ್ಯಚಿತ್ರಕ್ಕಾಗಿ ತುಣುಕನ್ನು ರೆಕಾರ್ಡ್ ಮಾಡಿದರು ಎಂದು ಝೆಲೆನ್ಸ್ಕಿಯ ಕಚೇರಿ ಆ ಸಮಯದಲ್ಲಿ ಹೇಳಿಕೆಯಲ್ಲಿ ತಿಳಿಸಿತ್ತು. ಅಲ್ಲದೆ, ಇಂದು ಯೂಕ್ರೇನ್​ಗೆ ಬೆಂಬಲ ನೀಡಲು ನಟ ಸೀನ್ ಪೆನ್ನ್​ ಕೂಡ ಯೂಕ್ರೇನ್​ನಲ್ಲಿ ಇದ್ದಾರೆ. ಅಂತಹ ಧೈರ್ಯ ಮತ್ತು ಪ್ರಾಮಾಣಿಕತೆಯ ಪ್ರದರ್ಶನಕ್ಕಾಗಿ ನಮ್ಮ ದೇಶವು ಅವರಿಗೆ ಕೃತಜ್ಞವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು.

ಪೆನ್ನ್​ ಅವರು ಸಾಕ್ಷ್ಯಾ ಚಿತ್ರದ ಭಾಗವಾಗಿ ಯೂಕ್ರೇನಿಯನ್​ ರಾಜಕಾರಣಿಗಳು, ಯೋಧರು ಮತ್ತು ಪತ್ರಕರ್ತರನ್ನು ಕೂಡ ಸಂದರ್ಶನ ಮಾಡಿದ್ದಾರೆ. ಆದರೆ, ಇದೀಗ ರಷ್ಯಾ ಇಡೀ ಯೂಕ್ರೇನ್​ ಅನ್ನು ಆಕ್ರಮಿಸುವತ್ತ ದಾಳಿಯನ್ನು ತೀವ್ರಗೊಳಿಸಿದ್ದು, ಬಹುತೇಕ ಜನರು ಯೂಕ್ರೇನ್​ನಿಂದ ಕಾಲ್ಕಿಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net