

ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದ ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳ ಚರ್ಚೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ ಕುರಿತ ವರದಿಗಳನ್ನು ಮೇಲ್ವಿಚಾರಣೆ ಮಾಡುವ ಅಮೆರಿಕದ ಸರ್ಕಾರಿ ಸಂಸ್ಥೆಯೊಂದು ಕರ್ನಾಟಕದ ನಡೆಯುತ್ತಿರುವ ಬೆಳವಣಿಗೆಯನ್ನು ಖಂಡಿಸಿದೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ರಶಾದ್ ಹುಸೈನ್ ಅವರು ಕರ್ನಾಟಕದ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದಾರೆ. ಶಾಲೆಗಳಲ್ಲಿ ಹಿಜಾಬ್ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆಯಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಹುಡುಗಿಯರನ್ನು ಕಡೆಗಣಿಸಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯವನ್ನು ಮುನ್ನಡೆಸುವ ಮಂತ್ರಿ ವರ್ಗವು ಯುಎಸ್ ಆಫೀಸ್ ಆಫ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ ಅಡಿಯಲ್ಲಿ ಬರುತ್ತದೆ. ಇದರ ರಾಯಭಾರಿಯಾಗಿ ಹುಸೈನ್ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆಯು ಸಹ ಭಾರತದಲ್ಲಿನ ಧಾರ್ಮಿಕ ಉದ್ವಿಗ್ನತೆಗಳ ಬಗ್ಗೆ ಈ ಇಲಾಖೆ ಕಾಮೆಂಟ್ ಮಾಡಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ಹಿಜಾಬ್ ಪ್ರಕರಣ ವರ್ಗಾವಣೆ ಆಗಿದ್ದು, ಫೆ. 14ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ತಕ್ಷಣ ಶಾಲಾ-ಕಾಲೇಜು ತೆರೆಯುವಂತೆ ಮತ್ತು ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೈಕೋರ್ಟ್ ವಿಸ್ತೃತ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ಇದರ ನಡುವೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ತಕ್ಷಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಂದರ್ಭದಲ್ಲಿ ಮಾತ್ರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದಿರುವ ಸುಪ್ರೀಂಕೋರ್ಟ್ ತಕ್ಷಣ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. (ಏಜೆನ್ಸೀಸ್)