

ಬ್ರಾಸಿಲಿಯಾ: ಟೇಕಾಫ್ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಸಿಲುಕಿದ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಪತನಗೊಂಡಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬ್ರೆಜಿಲ್ ರಾಜ್ಯ ಮಿನಾಸ್ ಗೆರೈಸ್ನ ಎಂಜೆನ್ಹೈರೊ ಕ್ಯಾಲ್ಡಾಸ್ ಎಂಬಲ್ಲಿ ಬುಧವಾರ ಸಂಭವಿಸಿದೆ. ಆರಂಭದಲ್ಲಿ ಗಾಳಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಚಾಪರ್, ಕೆಲವೇ ದೂರ ಕ್ರಮಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು, ನೆಲಕ್ಕೆ ಅಪ್ಪಳಿಸುವ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಇದೆ.
ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ಬ್ರೆಜಿಲ್ ಸಂಸದ ಹರ್ಸಿಲಿಯೊ ಅರಾಜೊ ಡಿನಿಜ್ (59) ಮತ್ತು ಗವರ್ನಡಾರ್ ವಲಡಾರೆಸ್ನ ಉಪ ಮೇಯರ್ ಡೇವಿಡ್ ಬರೊಸೊ (45) ಅವರನ್ನು ಚಾಪರ್ ಹೊತ್ತೊಯ್ಯುತ್ತಿತ್ತು. ಫ್ಯಾಬಿಯಾನೊ ರುಫಿನೊ ಎಂಬ ಪೈಲಟ್ ಮತ್ತು ಡಿನಿಜ್ ಅವರ ಪ್ರಚಾರ ತಂಡದ ಸದಸ್ಯ ಲುಸಿಯಾನೊ ಸಹ ಚಾಪರ್ನಲ್ಲಿದ್ದರು. ಪತನದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರೆಲ್ಲರನ್ನೂ ತಕ್ಷಣವೇ ರಕ್ಷಣೆ ಮಾಡಿ ಸಮೀಪ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದಿ ಸನ್ ವರದಿ ಮಾಡಿದೆ.
ಚಾಪರ್ ನಿಯಂತ್ರಣ ಕಳೆದುಕೊಂಡು ಎಲೆಕ್ಟ್ರಿಕಲ್ ಗ್ರಿಡ್ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಬದಿಯಲ್ಲಿ ಬಿದ್ದಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. (ಏಜೆನ್ಸೀಸ್)