ಆಟ-ಓಟ ಜೀವನಪಾಠ: ಗುರುಶಿಷ್ಯರು ಸಿನಿಮಾ ವಿಮರ್ಶೆ

Guru Shishyaru
Published on
  • ಚಿತ್ರ: ಗುರು ಶಿಷ್ಯರು
  • ನಿರ್ದೇಶನ: ಜಡೇಶ್ ಹಂಪಿ
  • ನಿರ್ಮಾಣ: ಶರಣ್ ಮತ್ತು ತರುಣ್ ಸುಧೀರ್
  • ತಾರಾಗಣ: ಶರಣ್, ನಿಶ್ವಿಕಾ ನಾಯ್ಡು, ಸುರೇಶ್ ಹೆಬ್ಳೀಕರ್, ಅಪೂರ್ವ ಕಾಸರವಳ್ಳಿ, ದತ್ತಣ್ಣ, ಹೃದಯ್, ಏಕಾಂತ್, ರಕ್ಷಕ್, ಮಹಾಂತೇಶ್ ಹಿರೇಮಠ್ ಮುಂತಾದವರು

| ಚೇತನ್ ನಾಡಿಗೇರ್

ಒಬ್ಬ ಹುಡುಗ ಒಂದಿಷ್ಟು ಪ್ಲೇಟ್​ಗಳಲ್ಲಿ ಚೌಚೌ ಬಾತ್ ತರುತ್ತಿರುತ್ತಾನೆ. ಇನ್ನೊಬ್ಬ ಬಂದು, ಅದರಲ್ಲಿ ಒಂದರಿಂದ ಒಂದಿಷ್ಟು ಬಿಸಿ ಕೇಸರಿ ಬಾತ್ ಬಾಯಿಗೆ ಹಾಕಿಕೊಳ್ಳುತ್ತಾನೆ. ಬಾಯಿ ಸುಟ್ಟಂತಾಗಿ, ತಕ್ಷಣವೇ ಅದನ್ನು ಆ ತಟ್ಟೆಗೇ ಉಗುಳುತ್ತಾನೆ. ದೂರದಲ್ಲಿ ನಿಂತ ಮೇಷ್ಟ್ರು ಇದನ್ನು ಗಮನಿಸುತ್ತಿರುತ್ತಾನೆ. ಅವನಿಗೆ ಒಳಗೊಳಗೇ ಭಯ. ಆ ತಟ್ಟೆ ಎಲ್ಲಿ ತನಗೇ ಸಿಕ್ಕಿಬಿಡುತ್ತದೋ ಎಂದು. ಆದರೆ, ಅದು ಜಸ್ಟ್ ಮಿಸ್ ಆಗಿ ಇನ್ನೊಬ್ಬರಿಗೆ ಸಿಗುತ್ತದೆ. ಮೇಷ್ಟ್ರು ನಿಟ್ಟುಸಿರು ಬಿಡುತ್ತಾನೆ. ಖುಷಿಯಿಂದ ಇನ್ನೊಂದು ಪ್ಲೇಟ್ ತೆಗೆದುಕೊಳ್ಳುತ್ತಾನೆ.

‘ಗುರು ಶಿಷ್ಯರು’ ಖುಷಿಕೊಡುವುದೇ ಇಂತಹ ಸಣ್ಣಸಣ್ಣ ದೃಶ್ಯಗಳಿಂದ. ಇಂತಹ ದೃಶ್ಯಗಳಿಲ್ಲದಿದ್ದರೆ ‘ಗುರು ಶಿಷ್ಯರು’ ಸಾಧಾರಣ ಚಿತ್ರವಾಗುವ ಅಪಾಯವಿತ್ತು. ಅದಕ್ಕೆ ಕಾರಣವೂ ಇದೆ. ಮೊದಲಿಗೆ ಇದೊಂದು ಕ್ರೀಡೆಯ ಕುರಿತಾದ ಚಿತ್ರ. ಕ್ರೀಡೆ ಕುರಿತಾದ ಚಿತ್ರಗಳು ಎಲ್ಲ ಭಾಷೆಗಳಲ್ಲೂ ಸಾಕಷ್ಟು ಬಂದಿರುವುದರಿಂದ ಕ್ಲೈಮ್ಯಾಕ್ಸ್​ನಲ್ಲಿ ಏನಾಗಬಹುದು ಎಂದು ಊಹಿಸುವುದು ಬಹಳ ಸುಲಭ. ಮೇಲಾಗಿ ಈ ಚಿತ್ರದ ಕಥೆ ಏನಿರಬಹುದು? ಎಂದು ಟ್ರೇಲರ್ ನೋಡಿ ಊಹಿಸಬಹುದು. ಹಾಗಿದ್ದರೂ ಚಿತ್ರವನ್ನು ನೋಡಿಸಿಕೊಂಡು ಹೋಗುವುದಕ್ಕೆ ಕಾರಣ ಖೋ ಖೋ.

ಕಥೆ ಬಗ್ಗೆ ಹೇಳಬೇಕೆಂದರೆ, ಬಹಳ ಸರಳ. ಗುರುವಿನ ಒತ್ತಾಯದ ಮೇರೆಗೆ ಮನೋಹರ್ (ಶರಣ್), ಪಿಟಿ ಮಾಸ್ಟರ್ ಆಗಿ ಬೆಟ್ಟದಪುರ ಎಂಬ ಹಳ್ಳಿಗೆ ಹೋಗುತ್ತಾನೆ. ಆ ಹಳ್ಳಿಯ ಜಾಗವು ರುದ್ರಪ್ಪ (ಅಪೂರ್ವ ಕಾಸರವಳ್ಳಿ) ಎಂಬ ಜಮೀನ್ದಾರನ ಪೂರ್ವಜರಿಗೆ ಸೇರಿದ್ದು. ಉಳುವವನೇ ಒಡೆಯ ಕಾನೂನು ಜಾರಿಗೆ ಬಂದಿದ್ದರಿಂದ ಜಮೀನು ಕಳೆದುಕೊಳ್ಳುವ ರುದ್ರಪ್ಪ, ಅದನ್ನು ಪಡೆಯಲು ನಾನಾ ಷಡ್ಯಂತ್ರ ಮಾಡುತ್ತಿರುತ್ತಾನೆ. ಬೆಟ್ಟಿಂಗ್ ಕಟ್ಟುವುದರಲ್ಲಿ ಜನಪ್ರಿಯನಾದ ಅವನು, ತನ್ನ ಖೋ ಖೋ ತಂಡವನ್ನು ಸೋಲಿಸಿದರೆ, ಮನೆಗೆ ತಲಾ 25 ಸಾವಿರ ರೂ. ಕೊಡುವುದರ ಜತೆಗೆ, ಹಳ್ಳಿಯನ್ನು ಬಿಟ್ಟುಕೊಡುವುದಾಗಿ ಬೆಟ್ ಕಟ್ಟುತ್ತಾನೆ. ಸರ್ಟಿಫಿಕೇಟ್​ಗಾಗಿ ಬಂದಿರುವ ಮನೋಹರನಿಗೆ ಆಟದಲ್ಲಿ ಹಳ್ಳಿಯ ತಂಡವನ್ನು ಗೆಲ್ಲಿಸಿ, ಹಳ್ಳಿಯನ್ನು ಉಳಿಸುವ ಜವಾಬ್ದಾರಿ ಹೆಗಲೇರುತ್ತದೆ. ಸ್ಪರ್ಧೆಯಲ್ಲಿ ಗೆದ್ದು ಹಳ್ಳಿಯನ್ನು ಉಳಿಸುವುದರ ಜತೆಗೆ, ನಶಿಸುವ ಅಪಾಯದಲ್ಲಿರುವ ಖೋ ಖೋ ಆಟವನ್ನು ಮನೋಹರ್ ಹೇಗೆ ಉಳಿಸುತ್ತಾನೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಒಂದು ಕ್ರೀಡೆಯ ಚಿತ್ರದಲ್ಲಿ ಏನೇನಿರುತ್ತದೋ ಅವೆಲ್ಲವೂ ಇಲ್ಲಿ ಮುಂದುವರಿದಿದೆ. ಸಾಮಾಜಿಕ ತಾರತಮ್ಯ, ದರ್ಪ, ಛಲ, ಹತಾಶೆ, ನೋವು, ಸಂತೋಷ, ತೃಪ್ತಿ ಎಲ್ಲವೂ ಈ ಚಿತ್ರದಲ್ಲಿದೆ. ಇಲ್ಲಿ ಮುಚ್ಚಿಟ್ಟುಕೊಳ್ಳುವುದಕ್ಕೆ ಏನೂ ಇಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಬಹಳ ಸುಲಭವಾಗಿ ಊಹಿಸಬಹುದು. ಚಿತ್ರ ನೋಡುತ್ತಿದ್ದಂತೆಯೇ ‘ಲಗಾನ್’ ಸೇರಿದಂತೆ ಹಲವು ಕ್ರೀಡೆಯ ಕುರಿತಾದ ಚಿತ್ರಗಳು ನೆನಪಿಗೆ ಬರಬಹುದು. ಮೊದಲೇ ಹೇಳಿದಂತೆ ಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡುವುದು ಖೋ ಖೋ. ಚಿತ್ರದ ಬಹುತೇಕ ಭಾಗವನ್ನು ಈ ಕ್ರೀಡೆ ಆವರಿಸಿಕೊಂಡಿದೆ. ಅದನ್ನು ನಿರ್ದೇಶಕ ಜಡೇಶ್ ಕಟ್ಟಿಕೊಟ್ಟಿರುವ ರೀತಿ ಬಹಳ ಖುಷಿಕೊಡುತ್ತದೆ. ಪೂರಕವಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮತ್ತು ಸಂಕಲನ ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ. ಚಿತ್ರದ ಒಂದೇ ಸಮಸ್ಯೆಯೆಂದರೆ ಅದು ಅವಧಿ. ಚಿತ್ರವನ್ನು ಇನ್ನಷ್ಟು ಚುರುಕುಗೊಳಿಸಿದ್ದರೆ, ಅವಧಿ ಕಡಿಮೆ ಮಾಡಿದ್ದರೆ ಇನ್ನಷ್ಟು ಆಪ್ತವಾಗುತ್ತಿತ್ತು.

ಶರಣ್ ಇರುವಾಗ ಕಾಮಿಡಿ ಹೇರಳವಾಗಿರಬಹುದು ಅಂದುಕೊಂಡರೆ ತಪು್ಪ. ಮೊದಲಾರ್ಧ ತಮ್ಮ ಮಾತುಗಳಿಂದ ಮಜ ಕೊಡುವ ಶರಣ್, ಕ್ರಮೇಣ ಚಿತ್ರ ಗಂಭೀರವಾಗುತ್ತಿದ್ದಂತೆ ಅವರೂ ಗಂಭೀರರಾಗುತ್ತಾರೆ. ಕೊನೆಗಂತೂ ಬಹಳ ಎಮೋಷನಲ್ ಆಗುತ್ತಾರೆ. ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್, ಮಹಾಂತೇಶ್ ಹಿರೇಮಠ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಅಪೂರ್ವ ಕಾಸರವಳ್ಳಿ ಎಂಬ ಖಡಕ್ ವಿಲನ್ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಮಕ್ಕಳೆಲ್ಲ ಬಹಳ ಕಷ್ಟಪಟ್ಟಿದ್ದಾರೆ. ಸುಧಾಕರ್ ಶೆಟ್ಟಿ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆ, ಅಜನೀಶ್ ಹಿನ್ನೆಲೆ ಸಂಗೀತ ಗಮನಸೆಳೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net