ತನ್ನನ್ನು ತಾನೇ ಮದ್ವೆಯಾದ ಯುವತಿ! ತಿಂಗಳ ಬಳಿಕ ಮಾಧ್ಯಮದ ಮುಂದೆ ಮನದ ನೋವು ಬಿಚ್ಚಿಟ್ಟ ಕ್ಷಮಾ

Kshama Bindu
Published on

ನವದೆಹಲಿ: ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು, ತಾನು ಹೇಳಿದಂತೆ ಜೂನ್​ 9ರಂದು ಮದುವೆಯಾಗಿದ್ದಾಳೆ. ಇದಕ್ಕೆ ಏಕವ್ಯಕ್ತಿ ವಿವಾಹ ಅಂತಲೂ ಕರೆಯಲಾಗುತ್ತದೆ. ಈ ಅಭ್ಯಾಸ ವಿದೇಶದಲ್ಲಿ ರೂಢಿಯಲ್ಲಿದೆ. ಇದೀಗ ಮದುವೆಯಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿರುವ ಕ್ಷಮಾ ಮದುವೆ ನಂತರ ಆಗಿರುವ ಬದಲಾವಣೆಗಳು ಏನು ಎಂಬುದನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಮದುವೆ ಆದಾಗಿನಿಂದ ಕೆಲಸ ಹಾಗೂ ಶಾಪಿಂಗ್​ಗಾಗಿ ಮನೆಯಿಂದ ಹೊರ ಹೋದಾಗ ಅನೇಕರು ನನ್ನನ್ನು ನೋಡುವ ರೀತಿಯೇ ಬದಲಾಗಿದೆ. ನಾನೇನೋ ಅಪರಾಧ ಮಾಡಿರುವಂತೆ ತುಂಬಾ ವಿಚಿತ್ರವಾಗಿ ನನ್ನತ್ತ ನೋಡುತ್ತಾರೆ. ಇದನ್ನು ನೋಡಿ ನನಗೆ ಬೇಸರವಾಗುತ್ತದೆ ಎಂದಿದ್ದಾರೆ. ಅಲ್ಲದೆ, ಅವರು ಖುಷಿಯಾಗಿರುವಂತೆ ಕಾಣುತ್ತಿಲ್ಲ.

ನನ್ನ ಮದುವೆಯ ದಿನವು ತನ್ನ ಜೀವನದ ಅತ್ಯುತ್ತಮ ದಿನವಾಗಿದೆ. ನನ್ನನ್ನು ನಾನು ಕನ್ನಡಿಯಲ್ಲಿ ನೋಡಿದಾಗ ಬೆರಗಾಯಿತು. ನನಗೆ ಸಾಮಾನ್ಯ ಭಾರತೀಯ ವಧುವಿನ ಚಿಂತೆ ಇರಲಿಲ್ಲ. ನನಗೇ ನಾನೇ ಸಾಕು ಅನ್ನಿಸುತ್ತಿತ್ತು. ಮದುವೆಯ ಉತ್ತಮ ಭಾಗವೆಂದರೆ, ಮದುವೆಯ ನಂತರವೂ ಹೆಚ್ಚು ಬದಲಾಗಿಲ್ಲ ಎಂದು ಕ್ಷಮಾ ಹೇಳಿದ್ದಾರೆ.

ನನಗೆ ಬೇರೆಯವರ ದೃಢೀಕರಣದ ಅಗತ್ಯವಿಲ್ಲ. ನನ್ನ ಸಂಗಾತಿ ಬೇರೆಡೆಗೆ ಸ್ಥಳಾಂತರ ಆಗಬೇಕಾಗಿರುವುದರಿಂದ ನಾನು ಕೂಡ ಬೇರೆ ನಗರಕ್ಕೆ ತೆರಳಬೇಕೆಂಬ ಚಿಂತೆ ನನಗಿಲ್ಲ. ನಾನು ನನ್ನ ಬಗ್ಗೆ ಮಾತ್ರ ಯೋಚಿಸಬಲ್ಲೆ, ತನ್ನನ್ನು ಹೊರತುಪಡಿಸಿ ಯಾರೂ ಅವಳಿಗೆ ಹೆಚ್ಚಿನ ಪ್ರೀತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕ್ಷಮಾ ಹೇಳಿಕೊಂಡಿದ್ದಾರೆ.

ಭಾರತೀಯ ಶಾಸ್ತ್ರ ಸಂಪ್ರದಾಯದಂತೆ ಜೂನ್​ 9ರಂದು ಕ್ಷಮಾ ಮದುವೆ ಆದರು. ಅವರ ಮದುವೆಯಲ್ಲಿ ಅತಿಥಿಗಳು ಪಾಲ್ಗೊಂಡಿದ್ದರು. ಈ ಹಿಂದೆ ಐಎಎನ್​ಎಸ್​ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಕ್ಷಮಾ, ನಾನು ಉಭಯಲಿಂಗಿ (ಬೈಸೆಕ್ಸುವಲ್​). ನಾನು ಪುರುಷ ಮತ್ತು ಮಹಿಳಾ ಜತೆಗಾರರನ್ನು ಹೊಂದಿದ್ದೇನೆ. ಇಂದಿಗೂ ಅವರ ಜತೆ ಸಂಪರ್ಕದಲ್ಲಿದ್ದೇನೆ. ಆದರೆ, ನಮ್ಮ ನಡುವೆ ಏನೂ ನಡೆದಿಲ್ಲ. ನಾನು ಅನೇಕ ವರ್ಷಗಳಿಂದ ಏಕಾಂಗಿಯಾಗಿದ್ದೇನೆ. ನನ್ನ ಏಕಾಂತದ ಮೇಲೆ ನನಗೆ ಪ್ರೀತಿಯಾಗಿದೆ. ನನ್ನನ್ನು ನಾನೇ ಪ್ರೀತಿ ಮಾಡುತ್ತೇನೆ. ಇದುವರೆಗೆ ಯಾರೊಂದಿಗೂ ಸಹ ಇಂತಹ ಅನುಭವ ಆರಲಿಲ್ಲ. ನಾನು ಚಿಕ್ಕಂದಿನಿಂದಲೂ ವಧುವಾಗಲು ಇಷ್ಟಪಡುತ್ತಿದ್ದೆ. ಆದರೆ, ಇನ್ನೊಬ್ಬರ ಪತ್ನಿ ಆಗಿ ಇರಲು ಆಗುವುದಿಲ್ಲ ಎಂದು ಕ್ರಮೇಣ ಅರಿತುಕೊಂಡೆ. ಮೂರ್ನಾಲ್ಕು ತಿಂಗಳುಗಳ ಕಾಲ ಯೋಚಿಸಿದ ನಂತರ, ಒಂದು ನಿರ್ಧಾರಕ್ಕೆ ಬಂದೆ. ಕೊನೆಗೆ ನನ್ನನ್ನು ನಾನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ವಡೋದರಾದ ಜನಕ್ಕೆ ಮಾತ್ರ ಗೊತ್ತಾಗಬೇಕು ಅಂತಾ ಎರಡು ಸ್ಥಳೀಯ ಪತ್ರಿಕೆ ಹಾಗೂ ಚಾನೆಲ್​ಗಳಿಗೆ ಸಂದರ್ಶನ ನೀಡಿದ್ದೆ. ಆದರೆ, ಈ ರೀತಿ ವೈರಲ್​ ಆಗುತ್ತದೆ ಅಂತಾ ನನ್ನ ಕನಸು, ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ನಾನು ಹಿಂದು ಧರ್ಮ ಮತ್ತು ಸಂಸ್ಕೃತಿಯಲ್ಲಿ ಅಚಲ ನಂಬಿಕೆ ಹೊಂದಿದ್ದೇನೆ. ಹೀಗಾಗಿ ನನ್ನ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಮದುವೆ ಆಗಲು ನಿರ್ಧರಿಸಿದ್ದೇನೆಂದು ಕ್ಷಮಾ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net