ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಿಂದಿರುಗಿಸಿ: ಕೋರ್ಟ್​ನಲ್ಲಿ ಹಿರಿಯ ನಟ ದ್ವಾರಕೀಶ್​ಗೆ ಮುಖಭಂಗ!

Dwarakish
Published on

ಬೆಂಗಳೂರು: ಸ್ಯಾಂಡಲ್​ವುಡ್ ಹಿರಿಯ ನಟ ದ್ವಾರಕೀಶ್​ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 50 ಲಕ್ಷ ರೂ. ಸಾಲದ ಪಡೆದು, ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪವಿದ್ದು, ಹಣ ಮರುಪಾವತಿಸುವಂತೆ ಕೋರ್ಟ್​ ತೀರ್ಪು ನೀಡಿದೆ.

ಸಾಲ ಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿ ದ್ವಾರಕೀಶ್​ ಸೋತಿದ್ದರು. ಇದೀಗ 52 ಲಕ್ಷ ರೂಪಾಯಿ ಸಾಲದ ಹಣ ವಾಪಸ್ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ. 2013ರಲ್ಲಿ ಕೆಸಿಎನ್ ಚಂದ್ರಶೇಖರ್​ರಿಂದ ದ್ವಾರಕೀಶ್​ ಅವರು ಸಾಲ ಪಡೆದುಕೊಂಡಿದ್ದರು. ನಟಿ ಪ್ರಿಯಾಮಣಿ ಅಭಿನಯದ ಚಾರುಲತಾ ಸಿನಿಮಾ ಬಿಡುಗಡೆಗಾಗಿ ದ್ವಾರಕೀಶ್ ಸಾಲ ಪಡೆದಿದ್ದರು.

ದ್ವಾರಕೀಶ್ ಸಂಬಂಧಿ ಸಂಜೀವ್ ಎಂಬುವರು ಕೆಸಿಎನ್ ಚಂದ್ರಶೇಖರ್​ರಿಂದ ಹಣ ಕೊಡಿಸಿದ್ದರು. 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ದ್ವಾರಕೀಶ್​ ಅವರು ಚೇಕ್ ನೀಡಿದ್ದರು. ಆದರೆ, ನಾನು ಚೆಕ್ ನೀಡಿಯೇ ಇಲ್ಲ ಮತ್ತು ಚೆಕ್​ನಲ್ಲಿರುವ ಸಹಿಯೂ ಕೂಡ ನನ್ನದಲ್ಲ ಎಂದು ಕೋರ್ಟಿನಲ್ಲಿ ದ್ವಾರಕೀಶ್​ ವಾದಿಸಿದ್ದರು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಚೆಕ್​ ಮೇಲಿರುವ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು.

2019 ರಲ್ಲಿ ಕೋರ್ಟ್ 52 ಲಕ್ಷ ರೂ. ಹಣ ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಆದೇಶಿಸಿತ್ತು. ಆದರೆ, ಹಣ ಹಿಂದಿರುಗಿಸದೇ ಸೆಷನ್ಸ್ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು ಇದೀಗ ದ್ವಾರಕೀಶ್​ಗೆ ಮುಖಭಂಗವಾಗಿದೆ. ಕೇವಲ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ಸಂಬಂಧಿ ಸಂಜೀವ್ ಕುಮಾರ್, ನಾನು ಮತ್ತು ಚಂದ್ರಶೇಖರ್ ಸ್ನೇಹಿತರು. ಚಾರುಲತಾ ಸಿನಿಮಾ ರಿಲೀಸ್ ವೇಳೆ ದ್ವಾರಕೀಶ್​ ಅವರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ 2013ರಲ್ಲಿ ನಾನೇ ಚಂದ್ರಶೇಖರ್ ಬಳಿ ಮಾತನಾಡಿ 50 ಲಕ್ಷ ರೂ. ಹಣ ಕೊಡಿಸಿದ್ದೆ. ನಂತರ ಸಾಕಷ್ಥು ಬಾರಿ ಹಣ ಕೊಡದೆ ಸತಾಯಿಸಿದ್ದರು. ಅಲ್ಲದೆ, ಚೆಕ್ ಕೊಟ್ಟು ನಂತರ ಸಹಿನೂ ನನ್ನದಲ್ಲ ಅಂತ ಕೋರ್ಟ್​ನಲ್ಲಿ ಹೇಳಿದ್ದರು. ನನ್ನ ಮೇಲೆ ಹಾಗೂ ಚಂದ್ರಶೇಖರ್ ಮೇಲೆ ಈ ಹಿಂದೆ ಎಚ್ಎಸ್ಆರ್ ಲೇಔಟ್​ನಲ್ಲಿ ಕೊಲೆ ಕೇಸ್ ಸಹ ದಾಖಲಿಸಿದ್ದರು. ನಂತರ ನಾವು ಬೇಲ್ ತೆಗೆದುಕೊಂಡಿದ್ವಿ. ಕೆಳ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಆದ್ರೆ, ದ್ವಾರಕೀಶ್ ಮತ್ತೆ 5 ಲಕ್ಷ ರೂ. ಕಟ್ಟಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಮತ್ತೆ ಕೇಸ್ ನಮ್ಮ ಪರವಾಗಿದೆ. ದ್ವಾರಕೀಶ್ ಈ ರೀತಿ ಮಾತನಾಡಬಾರದು. ನಮಗೆ ನ್ಯಾಯಕ್ಕೆ ಸಿಕ್ಕಿದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net