

ಬೆಂಗಳೂರು: ಮಹಾಮಾರಿ ಕರೊನಾ ಸೃಷ್ಟಿಸಿರುವ ಆರೋಗ್ಯ ಬಿಕ್ಕಟ್ಟು ಮಾನವೀಯತೆಯ ಪ್ರಾಮುಖ್ಯತೆಯನ್ನು ಸಾರುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕರೊನಾದಿಂದ ಮೃತಪಟ್ಟವರ ಆಸ್ತಿಯ ಬಗ್ಗೆ ಚಿಂತಿಸುತ್ತಾರೆಂದರೆ ಅಂಥವರ ಬಗ್ಗೆ ಏನು ಹೇಳ ಬೇಕು ನೀವೆ ಯೋಚಿಸಿ.
ಹೌದು. ಕರೊನಾದಿಂದ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಟೆಕ್ಕಿ ಪತಿ ಇದ್ದರೆ, ಪತ್ನಿಯ ಸಂಬಂಧಿಕರು ಆಕೆಯ ಆಸ್ತಿ ಕಬಳಿಸುವ ಸಂಚು ರೂಪಿಸುತ್ತಿರುವ ಅಮಾನವೀಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಟೆಕ್ಕಿ ಮೃತ ಪತ್ನಿಯ ಆಸ್ತಿ ಹೊಡೆಯಲು ಆಕೆ ಸಂಬಂಧಿಕರು ಪ್ಲಾನ್ ರೂಪಿಸಿದ್ದು, ಅವರ ಮೃಗೀಯ ವರ್ತನೆಯನ್ನು ಟೆಕ್ಕಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಟೆಕ್ಕಿ ಪ್ರವೀಣ್ ಹಾಗೂ ಪತ್ನಿ ನಿಮಿತಾ ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಸ್. ಏಪ್ರಿಲ್ 20ರಂದು ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ನಿಮಿತಾ, ಚಿಕಿತ್ಸೆ ಫಲಕಾರಿಯಾಗದೇ ಮೇ 2ರಂದು ಮೃತಪಟ್ಟರು.
ಮೇ 13ಕ್ಕೆ ತಿಥಿ ಕಾರ್ಯ ಮಾಡಲು ಪತಿ ಪ್ರವೀಣ್ ಹಾಗೂ ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ ಆಕೆ ಮೃತಪಟ್ಟ ಘಳಿಗೆ ಸರಿಯಿಲ್ಲ...ರಾಹುಕಾಲ ಇದೆ... ಮೂರು ತಿಂಗಳು ಮನೆಗೆ ಬರಬೇಡ ಎಂದು ಹೇಳಿ ಪತಿ ಪ್ರವೀಣ್ನನ್ನು ಮೃತಳ ಕುಟುಂಬಸ್ಥರು ಬೇರೆಡೆ ಕಳುಹಿಸಿದ್ದಾರೆ.
ಇದಾದ ಒಂದು ತಿಂಗಳ ಬಳಿಕ ಪ್ರವೀನ್ ಮನೆಗೆ ಮರಳಿದ್ದಾರೆ. ಅಷ್ಟರಲ್ಲಾಗಲೇ ಮನೆಯಿಲ್ಲಿದ್ದ 5 ರಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಹಾಗೂ ಕಾರನ್ನು ಸಂಬಂಧಿಕರು ದೋಚಿದ್ದಾರೆ. ಮೃತಳ ಬಾವ ಶಿವಪ್ಪ, ಆಕೆಯ ಸಹೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಹಲವರಿಂದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪ್ರವೀಣ್ ಆರೋಪಿಸಿದ್ದಾರೆ.
ಈ ಬಗ್ಗೆ ಆರ್ಆರ್ ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಎಫ್ಐಆರ್ ಬದಲು ಎಸ್ಸಿಆರ್ ದಾಖಲಿಸಿ ಸೆಟಲ್ಮೆಂಟ್ಗೆ ಪೊಲೀಸರು ಮುಂದಾದ ಆರೋಪ ಕೇಳಿಬಂದಿದೆ. ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸದೇ ಆರೋಪಿಗಳ ಪರ ವಕಾಲತ್ತು ವಹಿಸುತ್ತಿರುವ ಆರೋಪವೂ ಇದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮೃತಳ ಪತಿ ಪ್ರವೀಣ್ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)