ರೀಲ್ಸ್​ ಮಾಡಿದ ಎಡವಟ್ಟು: ಆಂಧ್ರದಲ್ಲಿ ವಿವಾದದ ಕಿಡಿಹೊತ್ತಿಸಿದ ಯುವತಿಯರಿಬ್ಬರ ಒಂದೇ ಮನೆಯ ವಾಸ!

Two Girls
Published on

ವಿಜಯವಾಡ: ಯುವತಿಯರಿಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿರುವ ವಿಚಾರವು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣದಲ್ಲಿ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಓರ್ವ ಯುವತಿಯ ತಾಯಿ ಒಂಗೋಲ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾಯಿಯ ದೂರಿನ ಪ್ರಕಾರ ಆಕೆಯ ಮಗಳು, ಇನ್ನೊಂದು ಯುವತಿಯ ಜತೆ ಒಂದೇ ಮನೆಯಲ್ಲಿ ವಾಸವಿದ್ದು, ಲಿವಿಂಗ್​ ಟುಗೆದರ್ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇಬ್ಬರು ಮದುವೆ ಆಗುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಯುವತಿಯರನ್ನು ವಿಚಾರಣೆ ಮಾಡಿದ್ದಾರೆ.

ಲಿವಿಂಗ್ ​ಟುಗೆದರ್ ರಿಲೇಶನ್​ಶಿಪ್ ಆರೋಪವನ್ನು ಅಲ್ಲಗೆಳೆದಿರುವ ಯುವತಿಯರು ನಾವಿಬ್ಬರು ಸಹೋದರಿಯರಂತೆ ಒಟ್ಟಿಗೆ ಇದ್ದೇವೆ ಎಂದು ಹೇಳಿದ್ದಾರೆ. ಯುವತಿಯೊಬ್ಬಳನ್ನು ಆಕೆಯ ವಿರೋಧದ ನಡುವೆಯೂ ಅವಳ ಅಂಕಲ್​ ಜತೆ ಮದುವೆ ಮಾಡಿಕೊಡಲು ಬಲವಂತ ಮಾಡಿದ್ದಕ್ಕೆ ಮನೆ ಬಿಟ್ಟು ಬಂದು ಬೇರೊಂದು ಯುವತಿಯ ಜತೆ ವಾಸಿಸುತ್ತಿದ್ದಾಳೆ. ಯುವತಿಯರಿಬ್ಬರು ಮಾಡಿರುವ ರೀಲ್ಸ್​ ಅವರನ್ನು ಸಲಿಂಗ ದಂಪತಿಗಳಂತೆ ತೋರಿಸುತ್ತಿದ್ದು, ಅದನ್ನು ಕೇವಲ ಮೋಜಿಗಾಗಿ ಮಾತ್ರ ಮಾಡಲಾಗಿದೆ ಎಂದು ಇಬ್ಬರು ಸ್ಪಷ್ಟನೆಯನ್ನು ನೀಡಿದ್ದಾರೆ.

ಯುವತಿಯೊಬ್ಬಳ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಇಬ್ಬರು ವಿವಾಹವಾಗಿದ್ದಾರೆ ಎಂದು ಹೇಳಿದ ಬಳಿಕ ಈ ವಿಚಾರ ಪಾಲಕರಿಗೆ ತಿಳಿದಿದೆ. ಮದುವೆ ವಿಷಯವನ್ನು ಇತರರಿಗೆ ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯುವತಿ ಎಚ್ಚರಿಸಿದ್ದಾಳೆ ಎಂದು ಮನೆಗೆಲಸದವಳು ಹೇಳಿದ್ದಾಳೆ. ಸದ್ಯ ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net