ಮೈ ಮೇಲಿದ್ದ ಚಿನ್ನವೇ ಚೇತನಾಗೆ ಮುಳುವಾಯ್ತಾ? ಪಾಲಕರ ಮಾತು ಕೇಳಿದಿದ್ರೆ ಖಂಡಿತ ಪ್ರಾಣ ಉಳಿಯುತ್ತಿತ್ತು!

actor chethana raj
Published on

ಬೆಂಗಳೂರು: ಫ್ಯಾಟ್ ಸರ್ಜರಿಗೆ ಒಳಗಾಗಿ ಮೃತಪಟ್ಟ ನಟಿ ಚೇತನಾ ರಾಜ್ ಪ್ರಕರಣದಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ತನ್ನ ಮೈ ಮೇಲಿದ್ದ ಚಿನ್ನವನ್ನು ಅಡವಿಟ್ಟು ಫ್ಯಾಟ್​ ಸರ್ಜರಿಗೆ ದಾಖಲಾಗಿದ್ದಳು ಎಂಬ ಸಂಗತಿ ಇದೀಗ ಬಯಲಾಗಿದೆ.

ಚೇತನಾ ರಾಜ್ ಫ್ಯಾಟ್ ಸರ್ಜಿರಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಕೇಳಿದರೆ ಹಣ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಹೀಗಾಗಿಯೇ ಮನೆಯವರಿಗೆ ಹೇಳದೆ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟು 80 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಳು. ಇದೇ ಹಣವನ್ನ ಡಾ. ಶೆಟ್ಟಿ ಕಾಸ್ಮೆಟಿಕ್ಸ್​ನಲ್ಲಿ ಕಟ್ಟಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.

ಇದಲ್ಲದೆ ಚೇತನಾ ರಾಜ್, ಫ್ಯಾಟ್ ಸರ್ಜರಿಗೆ ಒಳಗಾಗಲು ಜಿಮ್ ಟ್ರೈನರ್ ಒಬ್ಬರಿಂದ ಸಲಹೆ ಪಡೆದುಕೊಂಡಿದ್ದಳು ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ಈ ಬಗ್ಗೆ ಚೇತನಾ ಸ್ನೇಹಿತರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಟ್ರೈನರ್ ಸಲಹೆಯಂತೆ ಚೇತನಾ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದಳು.

ಸದ್ಯ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿರುವ ಸುಬ್ರಮಣ್ಯನಗರ ಪೊಲೀಸರು, ಮರಣೋತ್ತರ ಪರೀಕ್ಷೆ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ. ಇತ್ತ ಕಡೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ನೋಟಿಸ್ ನೀಡಲಾಗಿದೆ. ಆಸ್ಪತ್ರೆಯ ಬಾಗಿಲಿಗೆ ಅಧಿಕಾರಿಗಳು ನೋಟಿಸ್​ ಅಂಟಿಸಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net