More

    ಟ್ಯಾಕ್ಸಿ ಸೇವೆಯಲ್ಲಿ ಲೂಟಿ!: ಸರ್ಕಾರ ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ವಸೂಲಿ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಗ್ರಾಹಕರಿಗೆ ಆಪ್ ಆಧಾರಿತ ಸಾರಿಗೆ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳ ಕಳ್ಳಾಟ ಬಯಲಾಗಿದೆ. ಸರ್ಕಾರ ನಿಗದಿಪಡಿಸಿರುವ ಟ್ಯಾಕ್ಸಿ ಮೀಟರ್ ದರಕ್ಕಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದು, ವಾರ್ಷಿಕ ಸಾವಿರಾರು ಕೋಟಿ ರೂ. ಲೂಟಿ ಹೊಡೆಯುತ್ತಿವೆ. ಟ್ಯಾಕ್ಸಿ ಸೇವೆಯಲ್ಲಿ ನಡೆಯುತ್ತಿರುವ ವಂಚನೆ ಹೈಕೋರ್ಟ್ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ, ಬುಧವಾರದಿಂದಲೇ ಕಾರ್ಯಾಚರಣೆ ಆರಂಭಿಸಿದೆ.

    ವಾಹನಗಳ ಬೆಲೆ ಆಧರಿಸಿ ಎ,ಬಿ,ಸಿ,ಡಿ ಎಂದು ವರ್ಗೀಕರಿಸಿ ಸರ್ಕಾರ ಪ್ರಯಾಣ ದರ ನಿಗದಿಪಡಿಸಿದೆ. ಹವಾನಿಯಂತ್ರಿತ 1200 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಹಾಗೂ ನಗರ ಮಿತಿಯಿಂದ 25 ಕಿ.ಮೀ ಪರಿಧಿಯೊಳಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಕನಿಷ್ಠ 80 ರೂ. (4 ಕಿ.ಮೀಗೆ) ಹಾಗೂ ನಂತರ ಪ್ರತಿ ಕಿ.ಮೀಗೆ ಕನಿಷ್ಠ 20 ರೂ. ಹಾಗೂ ಗರಿಷ್ಠ 45 ರೂ. ನಿಗದಿಪಡಿಸಿದೆ. ಕಾಯುವಿಕೆ ದರ ಮೊದಲ 20 ನಿಮಿಷ ಉಚಿತವಾಗಿದ್ದು, ನಂತರ 15 ನಿಮಿಷಕ್ಕೆ 10 ರೂ.ನಂತೆ ವಿಧಿಸಲು ಸರ್ಕಾರದ ನಿಯಮಾವಳಿಯಲ್ಲಿ ಅವಕಾಶ ಇದೆ.

    ಕಡಿಮೆ ದರದಲ್ಲಿ ಗ್ರಾಹಕರಿಗೆ ಸೇವೆ ಕೊಡುವುದಾಗಿ ಜಾಹೀರಾತು ಕೊಟ್ಟು ಆಕರ್ಷಿಸುವ ಅಗ್ರಿಗೇಟರ್ ಕಂಪನಿಗಳು, ಸರ್ಕಾರ ನಿಗದಿಪಡಿಸಿರುವ ಮೀಟರ್ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿವೆ. ಒಂದೇ ಸ್ಥಳಕ್ಕೆ ಬೇರೆಬೇರೆ ಪ್ರಯಾಣಿಕರಿಗೆ ಬೇರೆಬೇರೆ ದರ ಪಡೆಯಲಾಗುತ್ತಿದೆ. ಅಲ್ಲದೆ, ಟ್ಯಾಕ್ಸಿಗಳ ಬುಕಿಂಗ್​ಗೆ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಸರ್ಜ್ ಪ್ರೖೆಸಿಂಗ್ (ಬೇಡಿಕೆ ದರ ಏರಿಕೆ) ಹೆಸರಿನಲ್ಲೂ ಸುಲಿಗೆ ಮಾಡಲಾಗುತ್ತಿದೆ. ಸಮಯದ ಆಧಾರದಲ್ಲಿ ದರ ಪಡೆಯಬಾರದು ಎಂಬ ನಿಯಮವಿದ್ದರೂ ಪ್ರಯಾಣದ ಅವಧಿ ದರ (ನಿಮಿಷಕ್ಕೆ 1 ರೂ.) ಪಡೆಯಲಾಗುತ್ತಿದೆ.

    ಬೆಂಗಳೂರಿನಂತಹ ಸಂಚಾರ ಒತ್ತಡವಿರುವ ನಗರಗಳಲ್ಲಿ ಗಂಟೆಗೆ 10 ಕಿ.ಮೀ ಕ್ರಮಿಸಬಹುದಷ್ಟೇ. ಅಂದರೆ ಒಂದು ಗಂಟೆಯ ಪ್ರಯಾಣಕ್ಕೆ 60 ರೂ. ಹೆಚ್ಚು ಹಣ ಕೊಡಬೇಕಾಗುತ್ತದೆ. 10 ಕಿ.ಮೀ. ಪ್ರಯಾಣ ದರ (ಮೊದಲ 4 ಕಿ.ಮೀ. 80+6 ಕಿ.ಮೀ.ಗೆ 120+ ಪ್ರಯಾಣದ ಅವಧಿಯ ದರ 60 ರೂ.) 220 ರೂ ಆಗುತ್ತದೆ. ಇದಲ್ಲದೇ ಶೇ.14 ಸೇವಾ ತೆರಿಗೆ ಸೇರಿಸಲಾಗುತ್ತದೆ.

    ಬೆಂಗಳೂರು ಒಂದರಲ್ಲೇ ನಿತ್ಯ 50 ಸಾವಿರ ಟ್ರಿಪ್ ಸಂಚಾರ ಇದೆ. ಅಲ್ಲದೆ, ಆಪ್ ಆಧಾರಿತ ಟ್ಯಾಕ್ಸಿಗಳ ಪ್ರಯಾಣ ದರ ದಿನದ 24 ಗಂಟೆಯೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸುತ್ತಾರೆ. ಬೇಡಿಕೆ ಹೆಚ್ಚಾಗಿರುವ ಸಮಯ ಅಥವಾ ಹೆಚ್ಚು ಬೇಡಿಕೆ ಇರುವ ಪ್ರದೇಶಗಳ ಗ್ರಾಹಕರಿಗೆ ಹೆಚ್ಚು ದರ ನಿಗದಿಪಡಿಸುತ್ತಾರೆ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಒಂದೂವರೆಯಿಂದ ನಾಲ್ಕು ಪಟ್ಟಿನವರೆಗೆ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ.

    ಗ್ರಾಹಕನಿಗೆ ಗೊತ್ತೇ ಆಗಲ್ಲ!: ಟ್ಯಾಕ್ಸಿ ಗೊತ್ತುಪಡಿಸುವ ಸಂದರ್ಭದಲ್ಲೇ ಪ್ರಯಾಣ ದರದ ಮೊತ್ತದ ಮಾಹಿತಿ ನೀಡಲಾಗುತ್ತದೆ. ಎಲ್ಲ ಟ್ಯಾಕ್ಸಿಗಳಿಗೆ ಜಿಪಿಆರ್​ಎಸ್ ಸಾಧನ ಅಳವಡಿಸಿರುವುದರಿಂದ ಚಲನವಲನದ ಸಂಪೂರ್ಣ ಮಾಹಿತಿ ಮುಖ್ಯ ಕಚೇರಿಯಲ್ಲಿ ಸಿಗುತ್ತದೆ. ಗ್ರಾಹಕ ಬುಕ್ ಮಾಡಿದ ಸಮಯದಲ್ಲಿ ಆತನಿರುವ ಪ್ರದೇಶದ 2 ಕಿ.ಮೀ ಸುತ್ತ ಎಷ್ಟು ಟ್ಯಾಕ್ಸಿಗಳು ಲಭ್ಯವಿವೆ ಎಂಬುದರ ಆಧಾರದಲ್ಲಿ ದರ ನಿಗದಿಪಡಿಸಿ ಗ್ರಾಹಕನಿಗೆ ಮಾಹಿತಿ ನೀಡಲಾಗುತ್ತದೆ. ಗ್ರಾಹಕನಿಗೆ ಬೇರೆ ಆಯ್ಕೆಗಳಿಲ್ಲದ ಕಾರಣದಿಂದಾಗಿ ಕಂಪನಿ ನಿಗದಿಪಡಿಸಿದ ದರ ಕೊಡಲು ಒಪ್ಪಿಗೆ ಸೂಚಿಸಿ ಬುಕ್ ಮಾಡುತ್ತಾನೆ. ಬೇಡಿಕೆಗೆ ಅನುಗುಣವಾಗಿ ದರ ನಿಗದಿಯಾಗುವುದರಿಂದ ಒಂದೇ ಸ್ಥಳಕ್ಕೆ ಬೇರೆಬೇರೆ ಸಮಯದಲ್ಲಿ ಬೇರೆಬೇರೆ ದರ ವಸೂಲಿ ಮಾಡಲಾಗುತ್ತದೆ. ಇದು ಗ್ರಾಹಕನ ಗಮನಕ್ಕೇ ಬರುವುದೇ ಇಲ್ಲ.

    ಅನಧಿಕೃತ ಓಡಾಟ: ಆಪ್ ಆಧಾರಿತ ಸಾರಿಗೆ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳಲ್ಲಿ ಓಲಾ ಹಾಗೂ ಉಬರ್ ಪ್ರಮುಖವಾಗಿವೆ. ಬೆಂಗಳೂರಲ್ಲೇ 1.97 ಲಕ್ಷ ಕ್ಯಾಬ್​ಗಳಿರುವ ಅಂದಾಜಿದೆ. ಆದರೆ, ಈ ಎರಡೂ ಕಂಪನಿಗಳ ಪರವಾನಗಿ ಮುಗಿದರೂ ನವೀಕರಣಗೊಳಿಸದೆ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 2017ರಲ್ಲಿ ಅಗ್ರಿಗೇಟರ್ ಲೈಸೆನ್ಸ್ ಪಡೆದಿದ್ದ ಓಲಾ, ಉಬರ್​ನ ಅವಧಿ 2021ರಲ್ಲೇ ಮುಗಿದಿದೆ. ಸಾರಿಗೆ ಇಲಾಖೆಗೆ ಮಾಹಿತಿ ಕೊಡದೆ ಕಚೇರಿ ಬದಲಾಯಿಸಿದೆ.

    ಅಗ್ರಿಗೇಟರ್ ಕಂಪನಿಗಳ ವಿರುದ್ಧ ಹಲವು ಆರೋಪ ಕೇಳಿ ಬಂದಿವೆ. ರಸ್ತೆ ಮಧ್ಯದಲ್ಲೇ ಟ್ಯಾಕ್ಸಿ ನಿಲ್ಲಿಸಿ, ಸರ್ಕಾರ ನಿಗದಿಪಡಿ ಸಿರುವ ದರ ಎಷ್ಟು? ಎಷ್ಟು ಪಡೆಯ ಲಾಗುತ್ತಿದೆ? ಎಂಬ ಮಾಹಿತಿ ಪಡೆಯಲಾಗುತ್ತಿದೆ. ಹೆಚ್ಚಿನ ದರ ಪಡೆದಿರುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುತ್ತಿದೆ.

    | ಎನ್.ಶಿವಕುಮಾರ್ ಆಯುಕ್ತರು, ಸಾರಿಗೆ, ರಸ್ತೆ ಸುರಕ್ಷತೆ

    ಅಧಿಕಾರಿಗಳ ತುರ್ತು ಸಭೆ: ಅಗ್ರಿಗೇಟರ್ ಕಂಪನಿ, ಟ್ಯಾಕ್ಸಿ ಚಾಲಕರ ವಂಚನೆ ಬಗ್ಗೆ ಹೈಕೋರ್ಟ್​ಗೂ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣ ಹೈಕೋರ್ಟ್ ಅಂಗಳಕ್ಕೆ ಹೋಗಿರುವುದರಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಆಯುಕ್ತರು, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂಬ ಕಾರಣಕ್ಕೆ ಮಂಗಳವಾರ ಅಧಿಕಾರಿಗಳ ತುರ್ತು ಸಭೆ ಕರೆದು ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ.

    ಟ್ಯಾಕ್ಸಿ ಸೇವೆಯಲ್ಲಿ ಲೂಟಿ!: ಸರ್ಕಾರ ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ವಸೂಲಿಆರ್​ಟಿಒಗಳಿಗೆ ಸೂಚನೆ

    • ಬೆಂಗಳೂರು, ಬೆಂ. ಗ್ರಾಮಾಂತರ, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರ್ಗಿಯಲ್ಲಿ ಟ್ಯಾಕ್ಸಿಗಳ ವಿರುದ್ಧ ಮೇ 31ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಬೇಕು
    • ಒಂದೇ ಸ್ಥಳಕ್ಕೆ ಬೇರೆಬೇರೆ ದರ ನಿಗದಿ, ಯಾವ ಮಾನದಂಡದಲ್ಲಿ ದರ ನಿರ್ಣಯಿಸಲಾಗುತ್ತಿದೆ ಎಂದು ಪರಿಶೀಲನೆ ನಡೆಸುವುದು
    • ದಾಖಲಿಸಿದ ಕೇಸ್​ಗಳ ಅಂಕಿ-ಅಂಶಗಳನ್ನು ನಿಗದಿತ ನಮೂನೆಯಲ್ಲಿ ಜೂ.6ರ ಒಳಗೆ ಮುಖ್ಯ ಕಚೇರಿಗೆ ಇ ಮೇಲ್ ಕಳುಹಿಸಬೇಕು ಎಂದು ಎಲ್ಲ ಜಂಟಿ ಆಯುಕ್ತರಿಗೆ ಕಮಿಷನರ್ ಸೂಚನೆ

    ಚಾಲಕರ ಕೈಚಳಕ!: ಕೆಲ ಟ್ಯಾಕ್ಸಿಗಳ ಚಾಲಕರು ಹೆಚ್ಚುವರಿ ಅಪ್ಲಿಕೇಷನ್ ಅಳವಡಿಸಿಕೊಂಡು, ಜಿಪಿಎಸ್ ವ್ಯವಸ್ಥೆ ಸ್ಥಗಿತಗೊಳಿಸುವ ಮೂಲಕವೂ ಕಿಲೋಮೀಟರ್ ಹೆಚ್ಚು ತೋರಿಸಿ ಹಣ ವಸೂಲಿ ಮಾಡುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಗ್ರಾಹಕರ ಪ್ರಯಾಣದ ವೇಳೆ ಟ್ಯಾಕ್ಸಿ ಒಂದಷ್ಟು ದೂರ ಕ್ರಮಿಸಿದ ಬಳಿಕ ಚಾಲಕ ಜಿಪಿಎಸ್ ಟ್ರಾ್ಯಕರ್ ಆಫ್ ಮಾಡುತ್ತಾನೆ. ಮತ್ತೆ ಜಿಪಿಎಸ್ ಆನ್ ಮಾಡಿದಾಗ ಹೆಚ್ಚು ಕಿ.ಮೀ ತೋರಿಸಿ ಬಿಲ್ ಏರಿಕೆಯಾಗುತ್ತದೆ. ಹೀಗಾಗಿ ಗ್ರಾಹಕ ತಾನು ಕ್ರಮಿಸಿದ್ದಕ್ಕಿಂತ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ.

    ಟ್ಯಾಕ್ಸಿಗಳ ವಿರುದ್ಧದ ಆರೋಪ

    • ಸರ್ಕಾರ ನಿಗದಿಪಡಿಸಿರುವ ಪ್ರಯಾಣ ದರಕ್ಕಿಂತ ಗ್ರಾಹಕರಿಂದ ಹೆಚ್ಚು ವಸೂಲಿ
    • ಬುಕಿಂಗ್​ಗೆ ವಿಪರೀತ ಬೇಡಿಕೆ ಸಂದರ್ಭದಲ್ಲಿ ಸರ್ಜ್ ಪ್ರೖೆಸಿಂಗ್ ಹೆಸರಲ್ಲಿ ಸುಲಿಗೆ
    • ಒಂದೇ ಸ್ಥಳಗಳಿಗೆ ಬೇರೆಬೇರೆ ಪ್ರಯಾಣಿಕರಿಗೆ ಬೇರೆಬೇರೆ ದರ ವಿಧಿಸುವುದು
    • ಒಟಿಪಿ ವ್ಯವಸ್ಥೆ ಇಲ್ಲದ ಆಪ್ ಬಳಸಿ ಚಾಲಕರೇ ಗ್ರಾಹಕರ ಸುಲಿಗೆ ಮಾಡುವುದು
    • ನಗದು ಕೊಟ್ಟರಷ್ಟೇ ಬರುತ್ತೇವೆ, ಆನ್​ಲೈನ್ ಪೇಮೆಂಟ್​ಗೆ ಬರಲ್ಲ ಎನ್ನುವ ಚಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts