ನಮ್ಮಪ್ಪನಿಗೆ ಸೇರಿದ್ದು ಅಂತ ನಡುರಸ್ತೆಯಲ್ಲೇ ಎಣ್ಣೆ ಕುಡಿದ ಸೋಶಿಯಲ್​ ಮೀಡಿಯಾ ಸ್ಟಾರ್​ಗೆ ಎದುರಾಯ್ತು ಸಂಕಷ್ಟ!

Social Media Star
Published on

ಡೆಹ್ರಾಡೂನ್​: ವಾಹನನಿಬಿಡ ರಸ್ತೆ ಮಧ್ಯದಲ್ಲಿ ಕುಳಿತು ಮದ್ಯ ಸೇವಿಸಿದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಇನ್​​ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್ ಬಾಬಿ ಕಟಾರಿಯಾ ವಿರುದ್ಧ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಿ. ಕಟಾರಿಯಾ ಜುಲೈ 28ರಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದ. ರಸ್ತೆ ಮೇಲೆ ಎಂಜಾಯ್​ ಮಾಡುವ ಸಮಯವಿದು ಎಂದು ಅಡಿಬರಹ ನೀಡಿದ್ದ. ವಿಡಿಯೋದಲ್ಲಿ ಡೆಹ್ರಾಡೂನ್​ನ ವಾಹನ ನಿಬಿಡ ರಸ್ತೆಯ ಮಧ್ಯದಲ್ಲೇ ಕುರ್ಚಿ ಮತ್ತು ಟೇಬಲ್​ ಹಾಕಿಕೊಂಡು ಕುಳಿತು ಮದ್ಯ ಸೇವಿಸುತ್ತಿರುವ ದಶ್ಯವಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಕಟಾರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ಗುರುಂಗಾವ್​ ಮೂಲದ ಕಟಾರಿಯಾ ಇನ್​ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಕಟಾರಿಯಾ ಆಪ್ತರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿ, ರೋಡ್​ ಆಪ್ನೆ ಬಾಪ್​ ಕಿ (ರಸ್ತೆ ನಮ್ಮಪ್ಪನಿಗೆ ಸೇರಿದ್ದು) ಎಂಬ ಹಾಡನ್ನು ವಿಡಿಯೋ ಬ್ಯಾಕ್​ಗ್ರೌಂಡ್​ ಹಾಕಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋ ವೈರಲ್​ ಆಗಿ ಕ್ರಮಕ್ಕೆ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರಾಖಂಡದ ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಉತ್ತರಾಖಂಡದ ಡಿಜಿಪಿ ಅಶೋಕ್​ ಕುಮಾರ್​, ವಿಡಿಯೋವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಕಟಾರಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net