ಅಯ್ಯೋ ಪಾಪ ಅನನ್ಯಾಗೆ ಹೀಗಾಗಬಾರದಿತ್ತು! ಬಾಲಿವುಡ್​ ಬ್ಯೂಟಿಯ ಪ್ಲಾನ್​ಗಳನ್ನೇ ಬುಡಮೇಲು ಮಾಡಿದ ಲೈಗರ್​

Ananya
Published on

ಹೈದರಾಬಾದ್​: ಲೈಗರ್​ ಚಿತ್ರದ ಹೀನಾಯ ಸೋಲು ಇಡೀ ಚಿತ್ರತಂಡದ ಮೇಲೆ ಕರಿನೆರಳಿನಂತೆ ಆವರಿಸಿದೆ. ನಿರ್ದೇಶಕ ಪುರಿ ಜಗನ್ನಾಥ್​ ಅವರು ಮುಂಬೈ ತೊರೆದರೆ, ನಟ ವಿಜಯ್​​ ದೇವರಕೊಂಡಗೆ ಮುಂದಿನ ಸಿನಿಮಾದ್ದೇ ಚಿಂತೆಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಇದೇ ಚಿತ್ರತಂಡದಿಂದ ಜನ ಗಣ ಮನ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಲೈಗರ್​ ಸೋಲು ಅದಕ್ಕೆ ಬ್ರೇಕ್​ ಹಾಕಿದೆ. ಇದೀಗ ಲೈಗರ್​ ಪರಿಣಾಮ ಬಾಲಿವುಡ್​ ಬ್ಯೂಟಿ ಅನನ್ಯಾ ಪಾಂಡೆ ಮೇಲೂ ಬೀರಿದೆ.

ಸಹಜ ಸೌಂದರ್ಯ, ಸ್ಕ್ರೀನ್​ ಫ್ರೆಂಡ್ಲಿ ಗ್ಲಾಮರ್​ ಮತ್ತು ಪ್ರಚಾರದ ವೇಳೆ ಧರಿಸುತ್ತಿದ್ದ ಬೋಲ್ಡ್​ ಡ್ರೆಸ್​ಗಳಿಂದಲೇ ಲೈಗರ್​ ಬ್ಯೂಟಿ, ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರ ಗಮನ ಸೆಳೆದಿದ್ದರು. ಲೈಗರ್​ ಬಿಡುಗಡೆಗೂ ಮುನ್ನವೇ ಎನ್​ಟಿಆರ್​-30 ಸಿನಿಮಾ ಸೇರಿದಂತೆ ಅನೇಕ ತೆಲುಗು ಸಿನಿಮಾಗಳು ಅವರನ್ನು ಅರಸಿ ಬಂದಿದ್ದವು. ಆದರೆ, ಯಾವೊಂದು ಚಿತ್ರಕ್ಕೂ ಅನನ್ಯಾ ಸಹಿ ಹಾಕಿರಲಿಲ್ಲ. ಲೈಗರ್​ ಸಿನಿಮಾದ ಫಲಿತಾಂಶಕ್ಕಾಗಿ ಅನನ್ಯಾ ಎದುರು ನೋಡುತ್ತಿದ್ದರು. ಒಂದು ವೇಳೆ ಲೈಗರ್​, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದರೆ, 4 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಯೋಜನೆಯನ್ನು ಅನನ್ಯಾ ಹಾಕಿಕೊಂಡಿದ್ದರು. ಆದರೆ, ಲೈಗರ್​ ಹೀನಾಯ ಸೋಲು ಅನನ್ಯಾ ಪ್ಲಾನ್​ಗಳನ್ನೇ ಬುಡಮೇಲು ಮಾಡಿದೆ.

ಇದೀಗ 1.5 ರಿಂದ 2 ಕೋಟಿ ರೂಪಾಯಿ ಕೊಟ್ಟರು ಓಕೆ ಎಂದು ಅನನ್ಯಾ ಹೇಳುತ್ತಿದ್ದಾರಂತೆ. ಆದರೆ, ತೆಲುಗು ಇಂಡಸ್ಟ್ರಿ ಇದೀಗ ಉಲ್ಟಾ ಹೊಡೆದಿದ್ದು, ಅನನ್ಯಾರಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಅದಕ್ಕೆ ಕಾರಣವೂ ಇದೆ. ತೆಲುಗು ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಯಶಸ್ಸಿನ ಆಧಾರದ ಮೇಲೆ ನಟ, ನಟಿಯರನ್ನು ಆಯ್ಕೆ ಮಾಡುತ್ತಾರೆ. ಇದೀಗ ಲೈಗರ್​ ಸೋಲಿನಿಂದಾಗಿ ಅನನ್ಯಾಗೆ ಮೊದಲೇ ಆಫರ್​ ಮಾಡಿದ್ದ ಸಿನಿಮಾಗಳೆಲ್ಲ ಬೇರೆಯವರ ಪಾಲಾಗಲಿವೆ.

ಎನ್​ಟಿಆರ್​ 30 ಸಿನಿಮಾಗೆ ಕೈರಾ ಅಡ್ವಾಣಿ ಮತ್ತು ರಶ್ಮಿಕಾ ಮಂದಣ್ಣಾಗೆ ಆಫರ್​ ಮಾಡಲಾಗಿದೆಯಂತೆ. ಕೃತಿ ಸ್ಯಾನನ್​ ಹೆಸರು ಸಹ ಚಾಲ್ತಿಯಲ್ಲಿದೆ. ಇತ್ತೀಚಿನ ಈ ಎಲ್ಲಾ ಸ್ಟಾರ್ ಹೀರೋಯಿನ್‌ಗಳು ತಮ್ಮ ಹೆಸರಿಗೆ ದೊಡ್ಡ ಹಿಟ್ ಹೊಂದಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಅನನ್ಯಾ ಈಗ ಬಾಲಿವುಡ್‌ನತ್ತ ಮಾತ್ರ ಗಮನ ಹರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಲೈಗರ್​ ಚಿತ್ರದ ಫಲಿತಾಂಶದ ಮೇಲೆ ಭಾರಿ ಪ್ಲಾನ್​ ಮಾಡಿಕೊಂಡಿದ್ದ ಅನನ್ಯಾಗೆ ಹೀಗಾಗಬಾರದಿತ್ತೆಂದು ಬಾಲಿವುಡ್​ ಗಲ್ಲಿಯಲ್ಲಿ ಚರ್ಚೆಯಾಗುತ್ತಿದೆ.

ಪ್ರಭಾಸ್​ ನಟನೆಯ ಸಾಹೋ ಬಿಡುಗಡೆ ಸಮಯದಲ್ಲೂ ಇದೇ ಆಗಿತ್ತು. ಆಗ ಶ್ರದ್ಧಾ ಕಫೂರ್​ಗೆ ಅನೇಕ ತೆಲುಗು ಸಿನಿಮಾಗಳ ಆಫರ್​ ಬಂದಿತ್ತು. ಆದರೆ, ಸಾಹೋ ಹೀನಾಯ ಸೋಲಿನ ಬಳಿಕ ಶ್ರದ್ಧಾ ತೆಲುಗು ಚಿತ್ರರಂಗದಿಂದಲೇ ದೂರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net