ಮಧ್ಯರಾತ್ರಿ ಕಾರಲ್ಲಿ ಬಂದು ಅಸಭ್ಯ ವರ್ತನೆ​: ಬಂಧಿತ ಆರೋಪಿ ಕಿಮ್ಸ್ ಕಾಲೇಜಿನ ಎಂಎಸ್ ವಿದ್ಯಾರ್ಥಿ

1202487
Published on

ಬೆಂಗಳೂರು: ಮಕ್ಕಳ ಜತೆಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಸಭ್ಯವಾಗಿ ವರ್ತಿಸಿದ್ದ ಅಪರಿಚಿತ ವ್ಯಕ್ತಿಯನ್ನು ಅಮೃತಹಳ್ಳಿ ಠಾಣಾ ಪೊಲೀಸರು ಮಂಗಳವಾರ (ಡಿ.14) ಬಂಧಿಸಿದ್ದಾರೆ.

ಬಂಧಿತನನ್ನು ವಿಜಯ ಭಾರದ್ವಾಜ್ ಎಂದು ಗುರುತಿಸಲಾಗಿದೆ. ಈತ ಬಿಹಾರ ಮೂಲದವನು. ಬೆಂಗಳೂರಿಗೆ ಬಂದು ಎಂಬಿಬಿಎಸ್ ಮುಗಿಸಿ ಎಂಎಸ್ ಓದುತ್ತಿದ್ದ. ಈತ ಕಿಮ್ಸ್ ಕಾಲೇಜಿನ ಎಂಎಸ್ ವಿದ್ಯಾರ್ಥಿ. ಕುಡಿದ ಮತ್ತಲ್ಲಿ ಅಸಭ್ಯವಾಗಿ ವರ್ತಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ಕಾಟಕ್ಕೆ ದೀಪಾ ಶ್ರೀಕುಮಾರ್ ಕುಟುಂಬ ಹೈರಾಣಾಗಿದ್ದರು. ದೀಪಾ ಶ್ರೀಕುಮಾರ್ ರವರ 21 ವರ್ಷದ ಮಗಳ ಜತೆ ಅಸಭ್ಯವಾಗಿ ವರ್ತಿಸಿದ್ದ. ಕಾರಲ್ಲಿ ಮುಂದೆ ಸಾಗಿದ್ರು ಹಿಂಬಾಲಿಸಿ ಹಿಂಸೆ ಕೊಟ್ಟಿದ್ದ. ಘಟನೆ ಸಂಬಂಧ ಅಮೃತಹಳ್ಳಿ ಠಾಣೆಗೆ ದೀಪಾ ದೂರು ನೀಡಿದ್ದರು.

ಘಟನೆ ಹಿನ್ನೆಲೆ ಏನು?

ಮಗಳು ಹಾಗೂ ಪುತ್ರನೊಂದಿಗೆ ದೀಪಾ ಶುಕ್ರವಾರ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ತಡರಾತ್ರಿ 2ಗಂಟೆಗೆ ಮನೆಗೆ ವಾಪಾಸ್ಸಾಗುತ್ತಿದ್ದರು. ಮಾರ್ಗಮದ್ಯೆ ಹೆಬ್ಬಾಳ ಬಳಿ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈರ್ ಬದಲಿಸುತ್ತಿದ್ದಾಗ ಅಪರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿತ್ತು. ಆ ಕಾರಿನಲ್ಲಿದ್ದ ವ್ಯಕ್ತಿ, ದೀಪಾ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದ. ಆ ವೇಳೆ ದೀಪಾ ಆತನಿಗೆ ಬೈದು ಕೂಡಲೇ ಕಾರ್ ಹತ್ತಿ ಹೊರಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಗೊರಗುಂಟೆಪಾಳ್ಯದವರೆಗೂ ಇವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಹೆದರಿದ ದೀಪಾ ಪೊಲೀಸರಿಗೆ ಕರೆ ಮಾಡಿ ನಡೆದ ಸಂಗತಿ ವಿವರಿಸಿದ್ದರು. ಇವರು ಗೊರಗುಂಟೆಪಾಳ್ಯ ತಲುಪುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಪೊಲೀಸರನ್ನು ಕಂಡ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಇದರಿಂದ ಆತಂಕಗೊಂಡ ದೀಪಾ ಮಕ್ಕಳ ಜತೆಗೆ ರಾತ್ರಿಯಿಡಿ ಆರ್​ಎಂಸಿ ಯಾರ್ಡ್ ಠಾಣೆಯಲ್ಲೇ ಉಳಿದಿದ್ದರು. ದೀಪಾ ದೂರಿನೊಂದಿಗೆ ಆರೋಪಿಯ ಕಾರಿನ ನಂಬರನ್ನೂ ಸಹ ನೀಡಿದ್ದರು.

ವಿಡಿಯೋ ವೈರಲ್

ಮಹಿಳೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಕಂಟ್ರೋಲ್ ರೂಮ್​ ಕರೆ ಮಾಡಿ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವಿಡಿಯೋ ಮಾಡಿದ್ದರು. ಎದುರಿಗಿನ ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net