ಕಾಲೇಜಿನಲ್ಲಿ ಡಿಬಾರ್ ಮಾಡಿದ್ದಕ್ಕೆ ಲೇಡಿಸ್​ ಪಿಜಿಯ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ದುರಂತ ಸಾವು

Girl Student
Published on

ಬೆಂಗಳೂರು: ಕಾಲೇಜಿನಲ್ಲಿ ಡಿಬಾರ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಬಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭವ್ಯಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಹಿಳಾ ಪಿಜಿಯ 5ನೇ ಮಹಡಿಯಿಂದ ಜಿಗಿದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನಲ್ಲಿ ಭವ್ಯಾ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದ ಮೇಲೆ ಡಿಬಾರ್ ಮಾಡಲಾಗಿತ್ತು.

ಡಿಬಾರ್​ ಮಾಡಿದ್ದರ ಬಗ್ಗೆ ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ ಭವ್ಯಾ ನೋವು ತೋಡಿಕೊಂಡಿದ್ದಳು. ಡಿಬಾರ್ ಮಾಡಿದ್ದಾರೆ. ನಾನು ಬದುಕುವುದಿಲ್ಲ ಎಂದು ಹೇಳಿಕೊಂಡಿದ್ದಳು. ಕೂಡಲೆ ಈ ವಿಚಾರವನ್ನು ದಿವ್ಯಾ ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಳು. ಕೂಡಲೇ ಕೋಲಾರದ ಮುಳಬಾಗಿಲಿನಿಂದ ಮಗಳ ಪಿಜಿಯತ್ತ ಪಾಲಕರು ಬರುತ್ತಿದ್ದರು.

ಮುಳಬಾಗಿಲಿನಿಂದ ಪಿಜಿ ಬಳಿ ಬರುತ್ತಿದ್ದಂತೆ ಪೊಲೀಸರಿಂದ ಕರೆ ಬಂದಿದೆ. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಕರೆ ಮಾಡಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದ ಪಾಲಕರು ಆಘಾತಕ್ಕೀಡಾಗಿದ್ದಾರೆ. ಆತ್ಮಹತ್ಯೆ ಸಂಬಂಧ ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net