ಮಳೆ ನೀರು ಸೋರದಂತೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್​ ತಂತಿ ತಗುಲಿ ಸ್ಥಳದಲ್ಲೇ ಇಬ್ಬರ ಸಾವು

BLG Electrution
Published on

ಬೆಳಗಾವಿ: ಮಳೆ ನೀರು ಸೋರದಂತೆ ತಡೆಯಲು ಮನೆಯ ಮಾಳಿಗೆ ಮೇಲೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿರುವ ದುರಂತ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಿನ್ನೆ (ಸೆ.05) ಸಂಜೆ ನಡೆದಿದೆ.

ಸುಳಗಾ ನಿವಾಸಿ ವಿನಾಯಕ ಕೃಷ್ಣ ಕಲಖಾಂಬಕರ (25) ಹಾಗೂ ಬೆನಕನಹಳ್ಳಿ ನಿವಾಸಿ ವಿಲಾಸ ಗೋ‍ಪಾಲ ಅಗಸಗೇಕರ (57) ಮೃತ ದುರ್ದೈವಿಗಳು. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿನಾಯಕ ಅವರ ಮನೆ ಸೋರುತ್ತಿತ್ತು. ಛಾವಣಿ ಮೇಲೆ ಹೊಸ ತಗಡುಗಳನ್ನು ಹಾಕಲು ವಿನಾಯಕ ಹಾಗೂ ವಿಲಾಸ ಮನೆಯ ಮೇಲೆ ಹತ್ತಿದ್ದರು. ಈ ವೇಳೆ ಮನೆಯ ಮೇಲೆ ಹಾದು ಹೋದ ವಿದ್ಯುತ್‌ ತಂತಿಗೆ ತಗಡು ಸಿಲುಕಿಕೊಂಡು, ವಿದ್ಯುತ್‌ ಪ್ರವಹಿಸಿ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇಬ್ಬರ ನೆರವಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿಗೂ ವಿದ್ಯುತ್​ ತಂತಿ ತಗುಲಿದೆ. ಈ ವೇಳೆ‌ ಕೆಳಗೆ ಬಿದ್ದು ಆತನಿಗೆ ಗಾಯಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ‌‌ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ‌ಗ್ರಾಮೀಣ‌ ಪೊಲೀಸ್ ‌ಠಾಣೆಯ ವ್ಯಾಪ್ತಿಯಲ್ಲಿ ಈಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net