

ಬೆಂಗಳೂರು: ಬಿಗ್ಬಾಸ್ 8ನೇ ಆವೃತ್ತಿಗೆ ಇಂದು ರಾತ್ರಿ ಅಂತಿಮವಾಗಿ ತೆರೆ ಬೀಳಲಿದೆ. ಮನೆಯಲ್ಲಿ ಅರವಿಂದ್, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಫೈನಲ್ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇಂದು ಮನೆಯಿಂದ ಮತ್ತೊಬ್ಬರು ಎಲಿಮಿನೇಟ್ ಆಗಲಿದ್ದು, ಕೊನೆಯಲ್ಲಿ ಉಳಿಯುವ ಇಬ್ಬರಲ್ಲಿ ವಿಜೇತ ಯಾರೆಂಬ ಕುತೂಹಲ ಗರಿಗೆದರಿದೆ.
ಶನಿವಾರದಿಂದಲೇ (ಆಗಸ್ಟ್ 7) ಫೈನಲ್ ಎಪಿಸೋಡ್ ಆರಂಭವಾಗಿದೆ. ಕಲರ್ಫುಲ್ ಕಾರ್ಯಕ್ರಮಗಳು ಸಹ ವೇದಿಕೆ ಮೇಲೆ ನಡೆದಿದೆ. ನಿನ್ನೆಯೇ ಮೊದಲಿಗೆ ಪ್ರಶಾಂತ್ ಸಂಬರಗಿ, ನಂತರ ವೈಷ್ಣವಿ ಗೌಡ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇನ್ನು ಅರವಿಂದ್ ಮತ್ತು ದಿವ್ಯಾ ಬಿಗ್ಬಾಸ್ ಮನೆಯಲ್ಲಿ ಅರವಿಯಾ ಎಂದೇ ಪ್ರಖ್ಯಾತರಾಗಿದ್ದಾರೆ. ಅದಕ್ಕೆ ಕಾರಣ ಇಬ್ಬರ ನಡುವಿನ ಸಂಬಂಧ. ಪರಸ್ಪರ ಪ್ರೀತಿಸುತ್ತಿದ್ದಾರೆಂದು ಹೇಳಲಾಗಿದೆ. ಇಬ್ಬರ ನಡೆ-ನುಡಿಯೂ ಹಾಗೇ ಇದೆ. ಇದೀಗ ಅರವಿಯಾ ಅಭಿಮಾನಿಗಳು ನಿರೂಪಕ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಫೈನಲ್ ಎಪಿಸೋಡ್ನಲ್ಲಿ ಇಬ್ಬರನ್ನು ಅವಮಾನಿಸಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಫೈನಲ್ ಎಪಿಸೋಡ್ನಲ್ಲಿಯೂ ದಿವ್ಯಾ-ಅರವಿಂದ್ ಕಾಲೆಳೆಯುವುದನ್ನು ಬಿಡಲಿಲ್ಲ. ಇಲ್ಲಿಯವರೆಗೂ ಟಿಆರ್ಪಿಗೋಸ್ಕರ ಇಬ್ಬರ ಸಂಬಂಧವನ್ನು ಸಂಭ್ರಮಿಸುತ್ತಿದ್ದರು. ಅಂತಿಮ ಹಂತಕ್ಕೆ ಬಂದ ಬಳಿಕ ಇಬ್ಬರನ್ನು ಟಾರ್ಗೆಟ್ ಮಾಡಿ ಕಾಲೆಳೆಯುತ್ತಿದ್ದಾರೆ ಎಂದು ಅರವಿಯಾ ಅಭಿಮಾನಿಗಳು ಗರಂ ಆಗಿದ್ದಾರೆ. (ಏಜೆನ್ಸೀಸ್)