ಬಾಲಿವುಡ್​ನ ಪ್ರಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ ವಿಧಿವಶ

Bappi Lahiti
Published on

ನವದೆಹಲಿ: ಸಂಗೀತ ಸಂಯೋಜಕ ಮತ್ತು ಖ್ಯಾತ ಗಾಯಕ ಬಪ್ಪಿ ಲಹಿರಿ (69) ಅವರು ಮುಂಬೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ವರ್ಷ ಏಪ್ರಿಲ್​ನಲ್ಲಿ ಬಪ್ಪಿ ಲಹಿರಿ ಅವರು ಕರೊನಾ ಪಾಸಿಟಿವ್​ ಆಗಿ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ದಿನಗಳಲ್ಲಿ ಗುಣಮುಖರಾಗಿ ಪೂರ್ಣ ಬೆಡ್​ ರೆಸ್ಟ್​ನಲ್ಲಿದ್ದರು. ಅವರ ಸುಲಭ ಓಡಾಟದ ಅನುಕೂಲಕ್ಕಾಗಿ ಅವರ ಜುಹು ನಿವಾಸದಲ್ಲಿ ಲಿಫ್ಟ್‌ನೊಂದಿಗೆ ಗಾಲಿಕುರ್ಚಿಯನ್ನು ಸಹ ಅಳವಡಿಸಲಾಗಿತ್ತು.

ಬಪ್ಪಿ ಲಹಿರಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ನಿರ್ದೇಶಕ ಡಾ. ದೀಪಕ್​ ನಮಜೋಶಿ ಮಾತನಾಡಿ, ಲಹಿರಿ ಅವರು ಸುಮಾರು ಒಂದು ತಿಂಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರವಷ್ಟೇ ಅವರ ಡಿಸ್ಚಾರ್ಜ್​ ಆಗಿತ್ತು. ಆದರೆ, ಆರೋಗ್ಯ ಮತ್ತೆ ಬಿಗಡಾಯಿಸಿದ್ದರಿಂದ ಮಂಗಳವಾರ ಅವರ ಕುಟುಂಬ ಮನೆಗೆ ಭೇಟಿ ನೀಡುವಂತೆ ವೈದ್ಯರಿಗೆ ಕರೆ ಮಾಡಿದರು. ಇದಾದ ಬಳಿಕ ಅವರನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ಅನೇಕ ಆರೋಗ್ಯ ಸಮಸ್ಯೆಯಿಂದ ಲಹಿರಿ ಬಳಲುತ್ತಿದ್ದರು. ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯಿಂದ ಮಧ್ಯರಾತ್ರಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಬಪ್ಪಿ ಲಹಿರಿ ಅವರು 1970-80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಪ್ರಖ್ಯಾತ ಹಾಡುಗಳನ್ನು ನೀಡಿದ್ದಾರೆ. ಅವುಗಳಲ್ಲಿ ಚಲ್ತೆ ಚಲ್ತೆ, ಡಿಸ್ಕೋ ಡಾನ್ಸರ್​ ಮತ್ತು ಶರಾಬಿ ಪ್ರಮುಖವಾದವು. 2020ರಲ್ಲಿ ಬಿಡುಗಡೆಯಾದ ಬಾಘಿ 3 ಚಿತ್ರದ ಭಂಕಾಸ್​ ಶೀರ್ಷಿಕೆಯ ಹಾಡೇ ಬಪ್ಪಿ ಲಹಿರಿ ಅವರ ಕೊನೆಯ ಹಾಡು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net