

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಸ್ಥಾಪಿಸಿರುವ "ಅಮ್ಮಾ ಕ್ಯಾಂಟೀನ್" ಹೆಸರು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೆಳಲಾಗುತ್ತಿದೆ.
ಮೇ 2ರಂದು ಹೊರಬಿದ್ದ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಡಿಎಂಕೆ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿದ್ದು, ರಾಜ್ಯದ ಅಧಿಕಾರದ ಗದ್ದುಗೆಯನ್ನು ಏರಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ಅಮ್ಮಾ ಕ್ಯಾಂಟೀನ್ ಹೆಸರನ್ನು ಅಣ್ಣಾ ಕ್ಯಾಂಟೀನ್ ಎಂದು ಬದಲಾಯಿಸಲು ಮುಂದಾಗಿದೆ.
2013ರಲ್ಲಿ ಜಯಲಲಿತಾ ಅವರ ಸಿಎಂ ಆಗಿದ್ದಾಗ ಅಮ್ಮಾ ಕ್ಯಾಂಟೀನ್ ಸ್ಥಾಪಿಸಿದ್ದು, ಸದ್ಯ 407 ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ. ಕ್ಯಾಂಟೀನ್‌ಗಳನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನಿರ್ಮಾಣ ಮಾಡಿದೆ. ಈ ಕ್ಯಾಂಟೀನ್ನಲ್ಲಿ ಒಂದು ಇಡ್ಲಿಗೆ ಕೇವಲ ಒಂದು ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ಕೇವಲ 3 ರೂಪಾಯಿಗೆ ಅನ್ನ ಮತ್ತು ದಾಲ್ ಅಥವಾ ಚಪಾತಿ ಮತ್ತು ದಾಲ್ ದೊರೆಯುತ್ತದೆ.
ಚುನಾವಣೆಯಲ್ಲಿ ಡಿಎಂಕೆ ಗೆದ್ದ ಖುಷಿಯಲ್ಲಿ ಮಂಗಳವಾರ ಡಿಎಂಕೆ ಕಾರ್ಯಕರ್ತರು ಅಮ್ಮಾ ಕ್ಯಾಂಟೀನ್ ನಾಮಫಲಕ ಕಿತ್ತೆಸೆದು ದಾಂಧಲೆ ನಡೆಸಿದ್ದರು. ಈ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಕಾರ್ಯಕರ್ತರ ನಡುವೆ ಕಲಹ ಉಂಟಾಗುವ ಸಾಧ್ಯತೆಯು ಇತ್ತು. ಈ ಘಟನೆ ನಡೆದ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನಾಮಫಲಕ ಕಿತ್ತೆಸೆದ ತನ್ನ ಕಾರ್ಯಕರ್ತರಿಬ್ಬರನ್ನು ಪಕ್ಷದಿಂದ ವಜಾ ಮಾಡಿದರು. ಅವರ ವಿರುದ್ಧ ದೂರು ಸಹ ನೀಡಲಾಗಿದ್ದು, ಇಬ್ಬರು ಬಂಧನಕ್ಕೆ ಒಳಗಾಗಿದ್ದಾರೆ.
ಇನ್ನು ಡಿಎಂಕೆ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಸಿಎಂ ಸಿ.ಎನ್. ಅಣ್ಣಾದೊರೈ ಹೆಸರನ್ನು ಕ್ಯಾಂಟೀನ್ಗೆ ಇಡಲು ಡಿಎಂಕೆ ನಿರ್ಧರಿಸಿದೆ. ಅಮ್ಮಾ ಕ್ಯಾಂಟೀನ್ನಲ್ಲಿ ಕಳಪೆ ಆಹಾರ ನೀಡಲಾಗುತ್ತದೆ ಎಂದು ಡಿಎಂಕೆ ಆರೋಪ ಮಾಡಿ, ಅಧಿಕಾರಕ್ಕೆ ಬಂದರೆ ಕಲೈನಗರ ಹೆಸರಿನಲ್ಲಿ 500 ಕ್ಯಾಂಟೀನ್‌ಗಳನ್ನು ತೆರೆದು ಗುಣಮಟ್ಟದ ಆಹಾರ ನೀಡುವುದಾಗಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಡಿಎಂಕೆ ನಾಯಕ ದುರೈಮುರುಗನ್, "ರಾಜ್ಯಾದ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಲು ಕ್ಯಾಂಟೀನ್‌ಗಳನ್ನು ತೆರೆಯುವುದಾಗಿ ಡಿಎಂಕೆ ಭರವಸೆ ನೀಡಿದೆ ಮತ್ತು ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಅದನ್ನು ಮೊದಲ ಕ್ರಮವಾಗಿ ಜಾರಿಗೊಳಿಸುತ್ತೇವೆ" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)