

ಆಗ್ರಾ: ಕರ್ತವ್ಯದ ವೇಳೆ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ಡಬ್ಸ್ಮ್ಯಾಶ್ ವಿಡಿಯೋ ಮಾಡಿ, ಅದನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ, ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅಮಾನತಾಗಿದ್ದ ಮಹಿಳಾ ಕಾನ್ಸ್ಟೇಬಲ್ ಇದೀಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಆಕೆಗೆ ವೆಬ್ ಸೀರಿಸ್ ಮತ್ತು ಮಾಡೆಲಿಂಗ್ನಲ್ಲಿ ಆಫರ್ಗಳು ಬರುತ್ತಿವೆ.
ಲೇಡಿ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ರಿವಾಲ್ವರ್ ಹಿಡಿದು ರಂಗ್ಬಾಜಿ ಚಿತ್ರದ ಡೈಲಾಗ್ಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದರು. ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ ಎಂದು ಡೈಲಾಗ್ ಹೊಡೆದಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಪೊಲೀಸ್ ಆಗಿದ್ದುಕೊಂಡು ರೌಡಿಸಂ ಬಗ್ಗೆ ಡೈಲಾಗ್ ಹೊಡೆಯುವುದು ಎಷ್ಟು ಸರಿ? ಅದು ಯೂನಿಫಾರ್ಮ್ ಮತ್ತು ರಿವಾಲ್ವರ್ ಹಿಡಿದುಕೊಂಡು ರೌಡಿಸಂ ವೈಭವೀಕರಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಪ್ರಿಯಾಂಕಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಆಕೆಯ ನಡೆ ಯುಪಿ ಪೊಲೀಸ್ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಲ್ಲದೆ, ಅವರನ್ನು ಅಮಾನತಿನಲ್ಲಿಡಲಾಗಿತ್ತು. ಅಮಾನತಿನಲ್ಲಿದ್ದ ಪ್ರಿಯಾಂಕಾ ಮಿಶ್ರಾ ಇದೀಗ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದು, ರಾಜೀನಾಮೆ ಅಂಗೀಕಾರವಾಗಿದೆ.
ಇನ್ನು ಪ್ರಿಯಾಂಕಾ ಅವರ ವಿಡಿಯೋ ವೈರಲ್ ಆಗಿ ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಆಫರ್ಗಳು ಪ್ರಿಯಾಂಕರನ್ನು ಹುಡುಕಿಕೊಂಡು ಬರುತ್ತಿದ್ದು, ಈ ಬಗ್ಗೆ ಮಾಧ್ಯವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಮಾಡೆಲಿಂಗ್ ಅಥವಾ ನಟನೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಆ ಕ್ಷೇತ್ರಕ್ಕೆ ಪ್ರವೇಶ ನೀಡುತ್ತೇನೆ. ಸದ್ಯ ನನಗೆ ವೆಬ್ ಸೀರಿಸ್ ಮತ್ತು ಮಾಡೆಲಿಂಗ್ನಿಂದ ಆಫರ್ ಬಂದಿದೆ. ಆದರೆ, ಅದನ್ನು ನಾನಿನ್ನು ಸ್ವೀಕರಿಸಿಲ್ಲ. ನಾನೇನೇ ನಿರ್ಧಾರ ತೆಗೆದುಕೊಂಡರು ಮೊದಲು ಯೋಚಿಸಿ ಆನಂತರ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಆಫರ್ ಬಂದಿರುವ ವೆಬ್ ಸೀರಿಸ್ ಹೆಸರೇಳಲು ಪ್ರಿಯಾಂಕಾ ನಿರಾಕರಿಸಿದರು. (ಏಜೆನ್ಸೀಸ್)