ಪಾಕ್​ ಪರ ಘೋಷಣೆ: ಆಗ್ರಾ ಪೊಲೀಸರಿಂದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ

Pak Pro
Published on

ನವದೆಹಲಿ: ಟಿ20 ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದ್ದಕ್ಕೆ ಪಾಕ್​ ಪರ ಘೋಷಣೆ ಕೂಗಿ, ವಿಜಯೋತ್ಸವ ಆಚರಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೂವರು ಕೂಡ ಕಾಶ್ಮೀರಿ ವಿದ್ಯಾರ್ಥಿಗಳಾಗಿದ್ದು, ಆಗ್ರಾದ ರಾಜಾ ಬಲ್ವಂತ್​ ಸಿಂಗ್​ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳನ್ನು ತೃತೀಯ ವರ್ಷದ ಇಂಜಿನಿಯರ್​ ವಿದ್ಯಾರ್ಥಿ ಅರ್ಷಿದ್​ ಯೂಸುಫ್​, ಇನಾಯತ್​ ಶೇಕ್​ ಹಾಗೂ ನಾಲ್ಕನೇ ವರ್ಷದ ಶೋಕತ್​ ಅಹ್ಮದ್​ ಗನೈ ಎಂದು ಗುರುತಿಸಲಾಗಿದೆ.

ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂವರನ್ನು ಅಮಾನತು ಮಾಡಿದೆ. ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕ್​ ಪರವಾಗಿ ಆರೋಪಿಗಳು ಸ್ಟೇಟಸ್​ ಹಾಕಿ ದೇಶದ್ರೋಹದ ಕೃತ್ಯ ಎಸಗಿದ್ದಾರೆ. ಇಷ್ಟೇ ಅಲ್ಲದೇ ಇನ್ನು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೇಲಿಯಲ್ಲಿ ಮೂವರು ಹಾಗೂ ಲಖನೌದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (1) (ಬಿ) (ಯಾವುದೇ ಹೇಳಿಕೆ/ವದಂತಿಯನ್ನು ಮಾಡಿದವರು/ಪ್ರಕಟಿಸುವವರು/ಪ್ರಸರಣ ಮಾಡುವುದು /ವರದಿ) ಮತ್ತು ಐಟಿ ಕಾಯಿದೆ 2008ರ ವಿಭಾಗ 66ಎಫ್​ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net