More

    ಸಿಖ್ಖರ ನೆಲದಲ್ಲಿ ಮದಗಜಗಳ ಕಾಳಗಕ್ಕೆ ರಂಗ ಸಜ್ಜು: ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಹೊಸ ಪಕ್ಷ ಘೋಷಣೆ

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗಲೇ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರತ್ಯೇಕ ಪಕ್ಷ ರಚನೆ ಮಾಡುತ್ತಾರೆನ್ನುವುದು ಸ್ಪಷ್ಟವಾಗಿತ್ತು. ಬುಧವಾರ ಚಂಡೀಗಢದಲ್ಲಿ ಹೊಸ ಪಕ್ಷದ ಘೋಷಣೆ ಮಾಡುವ ನಿರೀಕ್ಷೆಯಿತ್ತಾದರೂ, ಕೇಂದ್ರ ಚುನಾವಣಾ ಆಯೋಗದಿಂದ ಪಕ್ಷದ ಹೆಸರು ಮತ್ತು ಚಿಹ್ನೆ ಅಂತಿಮ ಒಪ್ಪಿಗೆ ಸಿಗಬೇಕಷ್ಟೇ ಎಂಬ ನೆಪ ಹೇಳಿ ಕ್ಯಾಪ್ಟನ್ ಈ ಘೋಷಣೆಯನ್ನು ಮುಂದಕ್ಕೆ ಹಾಕಿದ್ದಾರೆ. ಆದರೆ, ಈಗ ಪಕ್ಷ ರಚನೆಯನ್ನು ಖಚಿತಪಡಿಸಿರುವ ಕ್ಯಾಪ್ಟನ್, ಎಲ್ಲಾ 177 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ನಾನು ಹೇಳಿದ್ದಲ್ಲ. ಆದರೆ, ಸೀಟು ಹಂಚಿಕೆ ಈಗಲೂ ಮುಕ್ತವಾಗಿರುವ ವಿಚಾರ. ಕೃಷಿ ಕಾನೂನು ಬಿಕ್ಕಟ್ಟು ಸರಿಯಾಗದೆ ಇದು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏತನ್ಮಧ್ಯೆ, ಇಂದು ಕ್ಯಾಪ್ಟನ್ ಮತ್ತೊಮ್ಮೆ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಲಿದ್ದು, ಶುಕ್ರವಾರದಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ರೊಂದಿಗೂ ಮಾತುಕತೆ ನಡೆಸಲಿದ್ದಾರೆ. ಪಂಜಾಬ್​ನಲ್ಲಿ ಬಿಜೆಪಿ ಎರಡಂಕಿ ಸೀಟುಗಳನ್ನು ಗಳಿಸುವುದೂ ಕಷ್ಟ. ಆದರೆ, ಪಂಜಾಬ್​ನ್ನೂ ಕಾಂಗ್ರೆಸ್ ಮುಕ್ತಗೊಳಿಸುವುದು ಬಿಜೆಪಿ ಕಾರ್ಯತಂತ್ರದ ಒಂದು ಭಾಗ. ಕ್ಯಾಪ್ಟನ್ ಸಿಂಗ್ ಉದ್ದೇಶವೂ ಇದೇ ಆಗಿರುವುದರಿಂದ ಅದಕ್ಕೆ ಪೂರಕವಾಗಿ ತೆರೆಮರೆಯಲ್ಲೇ ಅಮಿತ್ ಷಾ-ಕ್ಯಾಪ್ಟನ್ ಸಿಂಗ್ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

    ನವಜೋತ್ ಸಿಧು ಕಾರಣದಿಂದಾಗಿ ಕಾಂಗ್ರೆಸ್​ನ ಹಲವು ಮುಖಂಡರು ಕ್ಯಾಪ್ಟನ್ ಪಕ್ಷದತ್ತ ಮುಖಮಾಡಲು ಯೋಚಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದೆರಡು ದಿನಗಳಿಂದ ರಾಹುಲ್ ಗಾಂಧಿ ಕೂಡ ಅಸಮಾಧಾನಿತರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ರಾಜ್ಯ ಘಟಕದ ಪ್ರಮುಖ ನಾಯಕರೊಂದಿಗೆ ಹಲವು ಸಭೆಗಳನ್ನು ನಡೆಸಿದ್ದಾರೆ. ಗೃಹ ಸಚಿವ ಸುಖ್​ಜಿಂದರ್ ಸಿಂಗ್ ರಂಧಾವಾ ಅವರನ್ನೂ ದೆಹಲಿಗೆ ಕರೆಸಿ ಮಾತುಕತೆ ಮಾಡಿದ್ದಾರೆ.

    ಸಿಧು ವರ್ಸಸ್ ಕ್ಯಾಪ್ಟನ್

    ಕ್ಯಾಪ್ಟನ್​ಗೆ ಕಾಂಗ್ರೆಸ್ ಹೈಕಮಾಂಡ್ ಮೇಲಿರುವ ಸಿಟ್ಟಿಗಿಂತ ದುಪ್ಪಟ್ಟು ಆಕ್ರೋಶ ನವಜೋತ್ ಸಿಧು ಮೇಲಿದೆ. ಸಿಧು ಸ್ಪರ್ಧಿಸುವ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿ ಹೋರಾಟ ಮಾಡುತ್ತೇನೆ ಎಂದು ಘೋಷಿಸಿರುವ ಕ್ಯಾಪ್ಟನ್ ಸಿಂಗ್ ಮುಂದಿನ ವಿಧಾನಸಭೆಯ ಕದನ ಕಣವನ್ನು ಮತ್ತಷ್ಟು ರೋಚಕಗೊಳಿಸಿದ್ದಾರೆ. ಅಮೃತಸರ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಸಿಧು ಮುಂದಿನ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದ್ದು, ಕ್ಯಾಪ್ಟನ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. 2014ರಲ್ಲಿ ಅಮೃತಸರ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಜಯ ಸಾಧಿಸಿದ್ದ ಕ್ಯಾಪ್ಟನ್ ಸಿಂಗ್, 2017ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್​ರ ಲಂಬಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅವರಿಗೆ ಸೋಲುಣಿಸಿದ್ದರು. ಸಿಧು ಆಟಾಟೋಪಗಳಿಂದ ಬೇಸತ್ತಿರುವ ಸ್ಥಳೀಯ ಕಾಂಗ್ರೆಸ್ಸಿಗರು, ಸಿಧು ಸೋಲಿಸಲೆಂದೇ ಕ್ಯಾಪ್ಟನ್​ಗೆ ನೆರವಾದರೆ ಅಚ್ಚರಿ ಇಲ್ಲ.

    ಸ್ವಂತ ಪಕ್ಷ ಹೊಸದೇನಲ್ಲ

    ಕ್ಯಾಪ್ಟನ್ ತಮ್ಮದೇ ರಾಜಕೀಯ ಪಕ್ಷ ಕಟ್ಟಿಕೊಳ್ಳುತ್ತಿರುವುದು ಇದೇನು ಮೊದಲಲ್ಲ. 1984ರಲ್ಲಿ ಸೇನೆ ಸ್ವರ್ಣಮಂದಿರದ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ತ್ಯಜಿಸಿದ್ದ ಕ್ಯಾಪ್ಟನ್, ಶಿರೋಮಣಿ ಅಕಾಲಿದಳ ಸೇರಿದ್ದರು. ಆದರೆ, 1992ರಲ್ಲಿ ಅಕಾಲಿದಳದೊಂದಿಗಿನ ಸಂಬಂಧ ಕಡಿದುಕೊಂಡ ಅವರು, ಶಿರೋಮಣಿ ಅಕಾಲಿದಳ (ಪಂಥಿಕ್) ಎಂಬ ಪಕ್ಷ ಸ್ಥಾಪಿಸಿದರು. ಆದರೆ, ರಾಜ್ಯ ರಾಜಕೀಯದಲ್ಲಿ ಅದು ಹೆಚ್ಚು ಪರಿಣಾಮ ಬೀರದ ಕಾರಣ 5 ವರ್ಷದ ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್​ನೊಂದಿಗೆ ವಿಲೀನಗೊಳಿಸಿದ್ದರು. ಅದಾಗಿ, 24 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದು, ಮತ್ತೊಂದು ಹೊಸ ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ.

    ಸಾಧ್ಯಾಸಾಧ್ಯತೆಗಳು

    • ಬಹುಪಾಲು ಕ್ಷೇತ್ರಗಳಲ್ಲಿ ಕಾಂಗ್ರೆಸ್​ನ ಒಂದಿಷ್ಟು ಮತಗಳು ಕ್ಯಾಪ್ಟನ್ ಪಕ್ಷದ ಮತಗಳಾಗಿ ಪರಿವರ್ತನೆಯಾಗಿ, ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಳ್ಳಬಹುದು
    • ಇದರಿಂದ ಕ್ಯಾಪ್ಟನ್ ಪಕ್ಷಕ್ಕಿಂತ ಹೆಚ್ಚು ಆಮ್ ಆದ್ಮಿ ಪಾರ್ಟಿ ಅಥವಾ ಶಿರೋಮಣಿ ಅಕಾಲಿದಳಕ್ಕೆ ಲಾಭವಾಗುವ ಸಾಧ್ಯತೆ
    • ನವಜೋತ್ ಸಿಧು ನಡೆಯಿಂದ ಅತೃಪ್ತಗೊಂಡ ಹಾಗೂ ಕ್ಯಾಪ್ಟನ್ ಸಿಂಗ್​ರನ್ನೂ ನೆಚ್ಚದ ಕಾಂಗ್ರೆಸ್ ಮತದಾರರು ಆಮ್ ಆದ್ಮಿಗೆ ಅವಕಾಶ ನೀಡೋಣ ಎಂದೂ ಮನಸ್ಸು ಬದಲಿಸಬಹುದು
    • ಚುನಾವಣೆಗೆ ಮುನ್ನ ಕೃಷಿ ಬಿಕ್ಕಟ್ಟು ಅಂತ್ಯಗೊಳ್ಳದಿದ್ದಲ್ಲಿ, ಚುನಾವಣೋತ್ತರ ಸನ್ನಿವೇಶದಲ್ಲಿ ಪರಿಸ್ಥಿತಿ ನೋಡಿಕೊಂಡು ಬಿಜೆಪಿ ಜತೆಗಿನ ಮೈತ್ರಿಯನ್ನು ಅಧಿಕೃತಗೊಳಿಸಬಹುದು.
    • ಅತಂತ್ರ ವಿಧಾನಸಭೆ ನಿರ್ವಣವಾದ ಸಂದರ್ಭದಲ್ಲಿ ಕ್ಯಾಪ್ಟನ್ ಅಕಾಲಿದಳದೊಂದಿಗೆ ಕೈಜೋಡಿಸುವ ಸಂಭವನೀಯತೆ ಕಡಿಮೆ. ಕ್ಯಾಪ್ಟನ್ ಉದ್ದೇಶ ಕಾಂಗ್ರೆಸ್ ಅಧಿಕಾರಕ್ಕೇರುವುದನ್ನು ತಪ್ಪಿಸುವುದು. ಹಾಗಾಗಿ, ಆಮ್ ಆದ್ಮಿಗೆ ಬೆಂಬಲ ಸೂಚಿಸಿ ಸರ್ಕಾರ ರಚನೆಗೆ ನೆರವಾಗಲೂಬಹುದು
    • ಸಿಧು ಮತ್ತು ಸಿಎಂ ಚರಣ್​ಜಿತ್ ಚನ್ನಿ ಒಗ್ಗಟ್ಟು ಪ್ರದರ್ಶಿಸಿದರೆ ಕ್ಯಾಪ್ಟನ್ ಸಿಂಗ್ ಪಕ್ಷಕ್ಕೆ ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ನಿರ್ವಹಣೆ ತೋರಲು ಕಷ್ಟಸಾಧ್ಯ. ಚುನಾವಣೆ ವೇಳೆಯೂ ಸಿಧು ಕ್ಯಾತೆ ತೆಗೆದಲ್ಲಿ ಇಬ್ಬರ ಜಗಳ ಮತ್ತೊಬ್ಬನಿಗೆ ಲಾಭ ಎಂಬಂತೆ ಕಾಂಗ್ರೆಸ್ ಮತಗಳು ದೊಡ್ಡ ಮಟ್ಟಿಗೆ ವಿಭಜನೆಯಾಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts