ಅಯ್ಯೋ ದುರ್ವಿಧಿಯೇ! ಬಿರುಗಾಳಿಯಿಂದ ಚಲಿಸುತ್ತಿದ್ದ ಬೈಕ್​ ಮೇಲೆ ತೆಂಗಿನ ಮರ ಬಿದ್ದು ಬಾಲಕಿ ಸಾವು

Bike
Published on

ಮಂಡ್ಯ: ಭಾರೀ ಬಿರುಗಾಳಿಗೆ ಸಿಲುಕಿ ತೆಂಗಿನ ಮರವೊಂದು ಕಾರು ಮತ್ತು ಬೈಕ್​ ಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ದೊಡ್ಡಪಾಳ್ಯದೊಡ್ಡಿ ಬಳಿಯ ಶ್ರೀರಂಗಪಟ್ಟಣ-ಬನ್ನೂರು ರಸ್ತೆಯಲ್ಲಿ ನಡೆದಿದೆ.

ಪ್ರಿಯಾಂಕಾ (12) ಮೃತಪಟ್ಟಿರುವ ಬಾಲಕಿ. ಕೆಆರ್​ಎಸ್​ ಗ್ರಾಮದ ನಾಗರಾಜು ಮತ್ತು ಪ್ರೇಮ ದಂಪತಿಯ ಪುತ್ರಿ. ರಾಜ್ಯದ ಹಲವೆಡೆ ಬಿಡುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯದೊಡ್ಡಿ ಬಳಿ ಬಿರುಗಾಳಿಯಿಂದ ಕಾರು ಹಾಗೂ ಬೈಕ್ ಮೇಲೆ ತೆಂಗಿನ ಮರ ಬಿದ್ದು ದುರ್ಘಟನೆ ಸಂಭವಿಸಿದೆ.

ಮೃತ ಪ್ರಿಯಾಂಕಾ ತಂದೆ-ತಾಯಿಯ ಜತೆ ಬೈಕ್​​ನಲ್ಲಿ ಸಂಬಂಧಿಕರ ಮನೆಗೆ ಹೋಗುತ್ತಿದ್ದಳು. ದೊಡ್ಡಪಾಳ್ಯದೊಡ್ಡಿ ಬಳಿ ಬರುತ್ತಿದ್ದಂತೆ ಬಿರುಗಾಳಿ ಹೆಚ್ಚಾಗಿದೆ. ದುರಾದೃಷ್ಟವಶಾತ್​ ಇದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ತೆಂಗಿನ ಮರ ಬೈಕ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಬೈಕ್ ಮುಂದೆ ಕುಳಿತಿದ್ದ ನಾಗರಾಜು ಹಾಗೂ ಪುತ್ರಿ ಪ್ರಿಯಾಂಕಾಗೆ ಗಭೀರ ಗಾಯವಾಗಿತ್ತು.

ರಕ್ತದ ಮಡುವಿನಲ್ಲಿ ನರಳುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಪ್ರಿಯಾಂಕಾ ಮೃತಪಟ್ಟಿದ್ದಾಳೆ. ಸದ್ಯ ನಾಗರಾಜ್​ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿಂಬದಿ ಕುಳಿತಿದ್ದ ಪತ್ನಿ ಪ್ರೆಮಾ, ಪುತ್ರ ಚೇತನ್​ಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಕಾರಿನ ಮೇಲೂ ಮರ ಬಿದ್ದಿದ್ದು, ಪಿಹಳ್ಳಿ ಗ್ರಾಮದ ನಾಗಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net