More

    ಸಹಕಾರ ಸಂಘಗಳ ಸದೃಢತೆಗೆ ಒತ್ತು

    ‘ಸಹಕಾರ ತತ್ವ’ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇದಕ್ಕೆ ಸಹಕಾರ ಇಲಾಖೆ ಮೂರ್ತರೂಪ ನೀಡಿದೆ. ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಜತೆಗೆ ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ, ಸಹಕಾರಿ ಸಂಘಗಳ ಸದೃಢಕ್ಕೆ ಒತ್ತು ಕೊಡಲಾಗಿದೆ. ರಾಜ್ಯ ಸಹಕಾರ ಮಹಾಮಂಡಳ ಕೂಡ ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಈ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಚಿಂತನೆ, ಮುಂದಿನ ಕ್ರಮಗಳನ್ನು ಹಂಚಿಕೊಂಡಿದ್ದಾರೆ.

    ಜನರ ವಿಶ್ವಾಸ ಗಳಿಕೆ ಬಲವರ್ಧನೆ

    | ಎಸ್.ಟಿ.ಸೋಮಶೇಖರ್ ಸಹಕಾರ ಸಚಿವ

    ಸಹಕಾರ ಇಲಾಖೆಗೆ ಹೊಸತನದ ಸ್ಪರ್ಶ, ಸುಧಾರಣೆಗೆ ಕೈಗೊಂಡ ಕ್ರಮಗಳೇನು?

    – ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ಎರಡು ವರ್ಷ ಕರೊನಾ ಸಾಂಕ್ರಾಮಿಕ ಪಿಡುಗು ಎದುರಿಸಬೇಕಾಯಿತು. ಸಹಕಾರ ಸಂಘ-ಸಂಸ್ಥೆಗಳಿಂದ 60 ಕೋಟಿ ರೂ. ಸಂಗ್ರಹಿಸಿ, ‘ಮುಖ್ಯಮಂತ್ರಿ ಕರೊನಾ ಪರಿಹಾರ ನಿಧಿ’ಗೆ ನೀಡಲಾಯಿತು. ಜತೆಗೆ ಆಶಾ ಕಾರ್ಯಕರ್ತರಿಗೆ ತಲಾ 3,000 ರೂ. ನೆರವು ಒದಗಿಸಲಾಯಿತು. ಶೂನ್ಯ ಬಡ್ಡಿ ದರದ ಸಾಲ ಪ್ರಮಾಣ ವಿತರಣೆ ಏರಿಕೆ, ಹೊಸಬರು-ಹಳಬರೆಂಬ ವ್ಯತ್ಯಾಸವಿಲ್ಲದಂತೆ ಕ್ರಮ. ತೋಟಗಾರಿಕೆಗೆ ಉತ್ಸುಕರಾದ ಸಾಫ್ಟವೇರ್ ಇಂಜಿನಿಯರ್ ಒಳಗೊಂಡಂತೆ ಹೊಸಬರಿಗೆ ಕಡ್ಡಾಯವಾಗಿ ನೀಡುವಂತೆ ಡಿಸಿಸಿ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಯಿತು. ಪ್ರಸಕ್ತ ಆರ್ಥಿಕ ವರ್ಷ (2021-22)ದಲ್ಲಿ 30.86 ಲಕ್ಷ ರೈತರಿಗೆ ಒಟ್ಟು 20,810 ಕೋಟಿ ರೂ. ಸಾಲ ವಿತರಣೆ ಗುರಿ ನಿಗದಿಯಾಗಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳ ಸದೃಢಕ್ಕೆ ಒತ್ತು ನೀಡಿದ್ದೀರಾ?

    – ಕೇಂದ್ರ ಸರ್ಕಾರ ‘ಆತ್ಮನಿರ್ಭರ್ ಭಾರತ’ ಯೋಜನೆಯಡಿ ಶೇಕಡ 1 ಮರುಪಾವತಿ ಷರತ್ತಿನ ಮೇಲೆ ತಲಾ ಎರಡು ಕೋಟಿ ರೂ. ನೆರವು ಒದಗಿಸಿದೆ. ರಾಜ್ಯದ 1,000 ಪ್ಯಾಕ್ಷ್​ಗಳನ್ನು ಆಯ್ಕೆ ಮಾಡಿದ್ದು, ಈಗಾಗಲೆ ಹಣ ಬಳಕೆ ಆಧಾರದಲ್ಲಿ 614 ಕೋಟಿ ರೂ. ಪಾವತಿಗೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ಯಾಕ್ಸ್​ಗಳು ಈ ಹಣದಲ್ಲಿ ಕಚೇರಿ ಸಹಿತ ಮಳಿಗೆ ಸಂಕೀರ್ಣ ಕಟ್ಟಿಕೊಂಡು ಶಾಶ್ವತ ಆದಾಯದ ಮೂಲಕ ಕಂಡುಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಾಯಧನ ನೀಡಲಿವೆ.

    ಪ್ಯಾಕ್ಸ್​ಗಳ ಮೇಲಿನ ಏಕಸ್ವಾಮ್ಯ, ಆರ್ಥಿಕ ದುಃಸ್ಥಿತಿಯಿಂದ ಹೊರತರುವ ಪ್ರಯತ್ನಳಾಗಿವೆಯೇ?

    – ರಾಜ್ಯದ 5,400 ಪ್ಯಾಕ್​ಗಳನ್ನು ಕಾರ್ಯವಿಧಾನದ ಮೇಲ್ವಿಚಾರಣೆಗೆ ಒಂದೇ ವೇದಿಕೆಯಡಿ ತರಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ರೈತರಿಗೆ ಸಾಲ ವಿತರಣೆ, ಮರು ಪಾವತಿ ಪರಿಶೀಲನೆ, ರೈತರ ಹೆಸರಿನಲ್ಲಿ ವಂಚನೆ ತಡೆ ಮುಂತಾದವುಗಳ ಮೇಲೆ ಈ ಸಾಫ್ಟವೇರ್ ಮುಖೇನ ನಿಗಾ ವಹಿಸಲಾಗುವುದು. ಹೊಸ ಸಾಫ್ಟ್​ವೇರ್ ಅಭಿವೃದ್ಧಿಗೆ 256 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.20, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್​ಗಳು ತಲಾ ಶೇ.10 ವೆಚ್ಚ ಭರಿಸಲಿವೆ.

    ಸಹಕಾರ ಸಂಘ-ಸಂಸ್ಥೆಗಳ ಅವ್ಯವಹಾರ, ಗ್ರಾಹಕರಿಗೆ ವಂಚನೆ ನಿಯಂತ್ರಣಕ್ಕೆ ಕ್ರಮಗಳೇನು?

    – ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ಠೇವಣಿ ಪಡೆದು ಗ್ರಾಹಕರಿಗೆ ವಂಚಿಸಿದ ಪ್ರಕರಣಗಳು ಗಮನಕ್ಕೆ ಬಂದಿದ್ದು, ಕಠಿಣ ಕಾನೂನು ರೂಪಿಸಲು ಚಿಂತನೆ ನಡೆದಿವೆ. ಇಲಾಖೆಯಲ್ಲಿ ಲೆಕ್ಕಪರಿಶೋಧಕರಿಲ್ಲ, ಲೆಕ್ಕಪತ್ರ ತಪಾಸಣೆಯಲ್ಲಿ ಗೋಲ್‍ಮಾಲ್ ಮಾಡಿದ ಕಾರಣಕ್ಕೆ 64 ಖಾಸಗಿ ಲೆಕ್ಕ ಲೆಕ್ಕಪರಿಶೋಧಕರಿಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಒಬ್ಬ ಸಿಎ 500ಕ್ಕೂ ಲೆಕ್ಕಪತ್ರ ತಪಾಸಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಲೆಕ್ಕಪತ್ರ ತಪಾಸಣೆ ಮಿತಿಗೊಳಿಸುವ ಜತೆಗೆ ಪಾರದರ್ಶಕತೆ ತರಲೆಂದು ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಿದ್ದೇವೆ.

    ಮತ್ತಷ್ಟು ಸಹಕಾರ ಕಾರ್ಯನಿರ್ವಹಣೆ

    | ಜಿ.ಟಿ.ದೇವೇಗೌಡ ಶಾಸಕರು, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ

    ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಸಹಕಾರ ಸಂಘಗಳ ಪಾತ್ರ, ಬಲವರ್ಧನೆ ಹೇಗೆ?

    – ಸಹಕಾರ ಚಳವಳಿ ಜನರ ಚಳವಳಿ. ಜನರ ಆರ್ಥಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಮಹತ್ವದ ಕೊಡುಗೆ ನೀಡುತ್ತಿವೆ. ರಾಜ್ಯದಲ್ಲಿ 46,544 ಸಹಕಾರ ಸಂಸ್ಥೆಗಳಿದ್ದು, 2.30 ಕೋಟಿ ಸದಸ್ಯರಿದ್ದಾರೆ. ಈ ಸಂಘಗಳಲ್ಲಿ 6343.38 ಕೋಟಿ ಷೇರು ಬಂಡವಾಳ, 1.15 ಲಕ್ಷ ಕೋಟಿ ರೂ. ಠೇವಣಿ ಇದ್ದು, 1.56 ಲಕ್ಷ ಕೋಟಿ ದುಡಿವ ಬಂಡವಾಳವಿದೆ. ಆರ್ಥಿಕ ಅಬಲರ ಏಳ್ಗೆಗೆ ಸಹಕಾರ ಸಂಘಗಳು ದೊಡ್ಡ ಮಟ್ಟದ ನೆರವಾಗಿವೆ. ರೈತರು, ಬಡವರು, ಮಧ್ಯಮ ವರ್ಗದವರ ಅಭಿವೃದ್ಧಿಗೆ ಸಹಕಾರಿಯಾಗಿವೆ. ಈ ಸಂಸ್ಥೆಗಳನ್ನು ಇನ್ನಷ್ಟು ಸದೃಢಗೊಳಿಸಲು ನಮ್ಮ ಪ್ರಯತ್ನ ಮುಂದುವರಿಯಲಿದೆ.

    ಸಹಕಾರ ಶಿಕ್ಷಣ, ತರಬೇತಿಗೆ ಮಹಾ ಮಂಡಳ ಯಾವ ಹೆಜ್ಜೆ ಇಟ್ಟಿದೆ?

    -ರಾಜ್ಯ ಸಹಕಾರ ಮಹಾ ಮಂಡಳ ವಿಶ್ವವಿದ್ಯಾಲಯವಿದ್ದಂತೆ. ಇಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಬೇರೆ ಬೇರೆ ವಿಶ್ವವಿದ್ಯಾಲಯ ಗಳಲ್ಲಿ ಸಹಕಾರ ಶಿಕ್ಷಣ ಪದವಿ ಪಡೆದ ಅಭ್ಯರ್ಥಿಗಳಿದ್ದಾರೆ. ಅವರಿಗೆ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ನೇಮಕದಲ್ಲಿ ಆದ್ಯತೆ ನೀಡಬೇಕು. ಸಹಕಾರ ವಿಷಯವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು.

    ಸಹಕಾರದ ಬಗ್ಗೆ ಜನಜಾಗೃತಿಗೆ ಕೈಗೊಂಡಿರುವ ಕ್ರಮಗಳೇನು?

    -ಸಹಕಾರ ಕ್ಷೇತ್ರಕ್ಕೆ 125 ವರ್ಷಗಳ ಸುದೀರ್ಘ ಇತಿಹಾಸವಿದೆ. ಜಾಗತೀಕರಣ, ಉದಾರೀಕರಣ, ಬಹುರಾಷ್ಟ್ರೀಯ ಕಂಪನಿಗಳ ಪೈಪೋಟಿ ನಡುವೆಯೂ ಸಹಕಾರ ವಲಯ ಪ್ರಬಲವಾಗಿದೆ. ಸಹಕಾರ ಸಂಸ್ಥೆಗಳ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಕ್ಷೇತ್ರದ ಅಧಿಕಾರಿಗಳಿಗೆ ಶಿಕ್ಷಣ, ತರಬೇತಿ, ಪ್ರಚಾರ ನೀಡಲಾಗುತ್ತದೆ.

    ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್​ನಿಂದ ಏನು ಸಹಾಯ?

    – ರಾಜ್ಯದಲ್ಲಿ ಹೈನುಗಾರಿಕೆ ಉತ್ತುಂಗ ಸ್ಥಿತಿಯಲ್ಲಿದೆ. ರಾಜ್ಯದ 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬೇಡಿಕೆಗಳಿಗೆ ಸ್ಪಂದಿಸಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಅವಶ್ಯ. ಹೈನುಗಾರರ ಸಾಲ ಸೌಲಭ್ಯ ಪೂರೈಕೆಗೆ ಸರ್ಕಾರ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಘೋಷಿಸಿ 100 ಕೋಟಿ ರೂ. ಷೇರು ಹಣದ ಭರವಸೆ ನೀಡಿದೆ. ಇದರಿಂದ ಸಹಕಾರ ವ್ಯವಸ್ಥೆ ಮತ್ತಷ್ಟು ಬಲವರ್ಧನೆಗೊಳ್ಳಲಿದೆ.

    ಪ್ರಸ್ತುತ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳ ಕೊಡುಗೆ ಏನು?

    – ಸಹಕಾರ ಬ್ಯಾಂಕ್​ಗಳು ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿವೆ. ಬಡವರು ಮತ್ತು ಅಬಲರ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿವೆ. ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗೃಹ ನಿರ್ವಣ, ಮಾರಾಟ ವಲಯಗಳ ಅಭಿವೃದ್ಧಿ ಮಾತ್ರವಲ್ಲ, ಕೃಷಿ ಮತ್ತು ಕ್ಷೀರ ಕ್ರಾಂತಿಗೆ ಕಾರಣವಾಗಿವೆ.

    ಬೆಳಗ್ಗೆ ಅಕ್ಕ, ರಾತ್ರಿ ತಂಗಿ ಸಾವು; ಪಾವಗಡ ಬಸ್ ಅಪಘಾತದಲ್ಲಿ ಸತ್ತವರ ಸಂಖ್ಯೆ 6ಕ್ಕೆ ಏರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts