

ಮನೆಯಲ್ಲಿ ತರಕಾರಿಗಳು, ಆಹಾರ ಪದಾರ್ಥಗಳು ಖಾಲಿಯಾದಾಗ ದಿಢೀರೆಂದು ಅತೀ ಸುಲಭವಾಗಿ ಮಾಡಬಹುದಾದ ಬಾಯಿಗೆ ರುಚಿ ಕೊಡುವ ಒಂದು ಸಿಕ್ರೇಟ್ ರೆಸಿಸಿ ಬಗ್ಗೆ ತಿಳಿಯೋಣ ಬನ್ನಿ. ಬ್ಯಾಚುಲರ್ಸ್ಗಳಿಗಂತೂ ಈ ರೆಸಿಪಿ ಹೇಳಿ ಮಾಡಿಸಿದ್ದು. ಮನೆ ಮಂದಿಯೆಲ್ಲಾ ಒಂದು ತುತ್ತು ಹೆಚ್ಚಿಗೆ ತಿನ್ನುವ ಈ ರೆಸಿಪಿಯ ಹೆಸರು ಫಟಾಫಟ್ ರೈಸ್. ಇಂಗ್ಲಿಷ್ ಹೆಸರಿದೆಯಲ್ಲಾ ಚೈನೀಸ್ ಫುಡ್ ಎಂದು ಭಾವಿಸಬೇಡಿ. ಇದೊಂದು ಪಕ್ಕಾ ಹಳ್ಳಿ ಶೈಲಿಯ ಅದ್ಭುತ ಕೈರುಚಿ. ಈ ಫಟಾಫಟ್ ರೈಸ್ ಮಾಡೋದು ಹೇಗೆಂದು ನೋಡೋಣ.
ಬೇಕಾಗುವ ಆಹಾರ ಪದಾರ್ಥಗಳು:
ಬೇಯಿಸಿದ ಅನ್ನ - 3 ಕಪ್
ಶುಂಠಿ ಪೇಸ್ಟ್ - 1/2 ಚಮಚ
ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ
ತುಪ್ಪ - 2 ಚಮಚ
ಖಾರದ ಪುಡಿ - 1/2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಕುಕ್ಕರ್ನಲ್ಲಿ ಅನ್ನ ಮಾಡಿಟ್ಟುಕೊಳ್ಳಿ. ಮನೆ ಮಂದಿಗೆಲ್ಲಾ ಆಗುವಂತೆ ಅಳತೆಯಲ್ಲಿ ಅನ್ನ ಮಾಡಿ. ನಂತರ ಬಿಸಿ ಬಿಸಿ ಅನ್ನವನ್ನು ತಟ್ಟೆಯಲ್ಲಿ ಅಥವಾ ಒಂದು ಪಾತ್ರೆಗೆ ಹಾಕಿ ಅದಕ್ಕೆ ಈ ಮೇಲೆ ಹೇಳಿರುವ ಸಾಮಾಗ್ರಿಗಳ ಮಿಶ್ರಣ ಹಾಕಿ ಮಿಕ್ಸ್ ಮಾಡಿ. ಬಿಸಿ ಬಿಸಿ ಅನ್ನದ ಮೇಲೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ತುಪ್ಪ, ಖಾರದಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿದರೆ ಫಟಾಫಟ್ ರೈಸ್ ಸವಿಯಲು ಸಿದ್ಧ. ಈ ಅಡುಗೆಗೆ ತುಪ್ಪ ಇಲ್ಲವಾದಲ್ಲಿ ಕೊಬ್ಬರಿ ಎಣ್ಣೆ ಅಥವಾ ಅಡುಗೆ ಎಣ್ಣೆಯನ್ನು ಬಳಸಬಹುದು. ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಮನೆಯಲ್ಲೇ ಮಾಡಿದ್ದರೆ ರುಚಿ ಹೆಚ್ಚು.
ಈ ರೆಸಿಪಿಯನ್ನು ಹೆಚ್ಚಾಗಿ ಮನೆಯಲ್ಲಿ ತರಕಾರಿ, ದಿನಸಿ ಖಾಲಿಯಾದಂತಹ ಸಮಯದಲ್ಲಿ ಮಾಡಬಹದು. ಜತೆಗೆ ರುಚಿಯೂ ಹೆಚ್ಚು. ಮಕ್ಕಳಿಗೆ, ಹುಷಾರಿಲ್ಲದವರಿಗೆ ಬಾಯಿ ಕೆಟ್ಟಾಗ ಈ ಅಡುಗೆ ಮಾಡಿ ಕೊಟ್ಟರೆ ಅವರು ಒಂದು ತುತ್ತು ಹೆಚ್ಚು ತಿನ್ನುವುದರಲ್ಲಿ ಸಂಶಯವಿಲ್ಲ. ಮಕ್ಕಳಿಗಂತೂ ಈ ಅನ್ನವನ್ನು ಕಲಸಿಕೊಟ್ಟರೆ ಅಜ್ಜಿಯ ಕೈತುತ್ತು ತಿಂದಷ್ಟೇ ಖುಷಿಯಾಗುತ್ತದೆ. ಇನ್ನೇಕೆ ತಡ ನೀವೂ ಒಮ್ಮೆ ಮಾಡಿ ಈ ದಿಢೀರ್ ರೆಸಿಸಿ ಫಟಾಫಟ್ ರೈಸ್.