ಸಮಸ್ಯೆಗಳ ಶೀಘ್ರ ನಿವಾರಣೆ

grama sabhe
ಕೋಡಿ ಗ್ರಾಮಸಭೆಯಲ್ಲಿ ಗ್ರಾಮಲೆಕ್ಕಿಗ ಗಿರೀಶ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಕೋಟ
ಕೋಡಿ ಗ್ರಾಮ ಪಂಚಾಯಿತಿ ಪ್ರಥಮ ಗ್ರಾಮಸಭೆ ಅಧ್ಯಕ್ಷೆ ಗೀತಾ ಕಾರ್ವಿ ನೇತೃತ್ವದಲ್ಲಿ ಕೋಡಿ ಸರ್ಕಾರಿ ಶಾಲೆ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಅಕ್ರಮ ಹೋಮ್‌ಸ್ಟೇ, ರೆಸಾರ್ಟ್‌ಗೆ ಕಾಂಪೌಂಡ್ ಕುರಿತು ಗ್ರಾಮಸ್ಥರೊಬ್ಬರು ಪ್ರಸ್ತಾಪಿಸಿದ್ದು, ಸಮುದ್ರ ಕಿನಾರೆಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದರು. ಪಿಡಿಒ ರವೀಂದ್ರ ರಾವ್ ಪ್ರತಿಕ್ರಿಯಿಸಿ, ಕಾಂಪೌಂಡ್ ನಿರ್ಮಾಣಕ್ಕೆ ಪಂಚಾಯಿತಿ ಪರವಾನಗಿ ನೀಡಿಲ್ಲ. ಅಕ್ರಮ ನಿರ್ಮಾಣ ಬೆಳಕಿಗೆ ಬಂದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಮಾತನಾಡಿ, ಕೋಡಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 300ಕ್ಕೂ ಅಧಿಕ ಮನೆಗಳಿಗೆ ಇದುವರೆಗೆ ಹಕ್ಕುಪತ್ರ ದೊರೆತಿಲ್ಲ. ಇದಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು ಎಂದು ದೂರಿದರು. ಗ್ರಾಮಲೆಕ್ಕಿಗ ಗಿರೀಶ್ ಪ್ರತಿಕ್ರಿಯಿಸಿ, ಸಾಕಷ್ಟು ವರ್ಷಗಳಿಂದ ಈ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಕೆಲವು ಹಕ್ಕುಪತ್ರಗಳಿಗೆ ಹಣ ಪಾವತಿಸದಿರುವುದರಿಂದ ಅದರ ಬಗ್ಗೆ ಮಾಹಿತಿ ನೀಡಿ ಇನ್ನುಳಿದ ಪರಂಬೋಕು, ಸಮುದ್ರ ತಟದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈ ಕಡತ ಪೂರ್ಣಗೊಳ್ಳಬೇಕಿದೆ ಎಂದರು.

ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿವೇಕ್ ಗಾವಂಕಾರ್ ನೋಡಲ್ ಅಧಿಕಾರಿಯಾಗಿದ್ದರು. ಕಾರ್ಯದರ್ಶಿ ಉಷಾ ಶೆಟ್ಟಿ ವರದಿ ಮಂಡಿಸಿದರು. ಪಿಡಿಒ ರವೀಂದ್ರ ರಾವ್ ಗ್ರಾಮಸಭೆ ನಿರೂಪಿಸಿದರು. ಪಂಚಾಯಿತಿ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಜೀವನ ಸ್ಥಿತಿ ಅಧೋಗತಿ

ಉಪ್ಪು ನೀರಿನ ಹೊಳೆಯಲ್ಲಿ ಪಚ್ಚಿಲೆ ಕೃಷಿ ನೆಪದಲ್ಲಿ ಮಾಡಲಾದ ಕಂಬಗಳ ಚಪ್ಪರ ಇಡೀ ಹೊಳೆಯನ್ನೇ ಆವರಿಸಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರ ಜೀವನ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ ಎಂದು ಮೀನುಗಾರರು ಪ್ರಶ್ನಿಸಿದ್ದು, ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕಿನಾರಾ ಮೀನುಗಾರ ಸೊಸೈಟಿ ನಿರ್ದೇಶಕ ಸುದಿನ ಕೋಡಿ, ಇತ್ತೀಚೆಗಿನಿಂದ ಪಚ್ಚಿಲೇ ಕೃಷಿ ಉದ್ಯಮವಾಗಿದೆ. ಆದರೂ ಕೆಲವರು ಸಹಿ ಪಡೆದು ಸರ್ಕಾರದ ಸಬ್ಸಿಡಿ ಪಡೆಯುತ್ತಿದ್ದು, ಸಾಂಪ್ರದಾಯಿಕ ಮೀನುಗಾರರೂ ಒಳಗೊಂಡಿದ್ದಾರೆ. ಅಕ್ರಮ ವ್ಯವಸ್ಥೆ ಪತ್ತೆಯಾದರೆ ಅದನ್ನು ತೆರವುಗೊಳಿಸಲಾಗುತ್ತದೆ ಎಂದರು. ಧ್ವನಿಗೂಡಿಸಿದ ಪಿಡಿಒ ಈ ಕುರಿತು ಶೀಘ್ರವೇ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಸಭೆ ಆಯೋಜಿಸಲಾಗುತ್ತದೆ ಎಂದರು.

ಬೀಟ್ ಪೊಲೀಸ್ ಬಲಗೊಳಿಸಿ

ಕೋಡಿ ಮಹಾಸತೀಶ್ವರಿ ದೇಗುಲ ಮುಂಭಾಗದ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಕೋಡಿ ಭಾಗದಲ್ಲಿ ಬೀಟ್ ಪೊಲೀಸ್ ಬಲಗೊಳಿಸಲು ಹಾಗೂ ಹೊಸಬೇಂಗ್ರೆ ಭಾಗದಲ್ಲಿ ಸುಳಿ ಇಲ್ಲದ ತೆಂಗಿನಮರ ಬೀಳುವ ಸ್ಥಿತಿಯಲ್ಲಿದ್ದರೆ ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net