ಬೈಂದೂರು: ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ದೊರಕಿಸಿಕೊಡಲು ಅಧಿಕಾರಿಗಳಿಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸೂಚನೆ ನೀಡಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಯೋಜನೆಗಳ ಸವಲತ್ತು ಪಡೆಯಲು ಅರ್ಜಿ ಹಾಕಿರುವ ಫಲಾನುಭವಿಗಳ ಆಯ್ಕೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಸಮುದಾಯಗಳ ಅಭಿವೃದ್ಧಿಗೆ ಇರುವ ನಿಗಮಗಳಲ್ಲಿ ಅನುಷ್ಠಾನಗೊಳ್ಳುವ ಸಾಲ ಸೌಲಭ್ಯ ಯೋಜನೆ ಅರ್ಹತೆ ಇದ್ದ ಎಲ್ಲರಿಗೂ ತಲುಪಲು ವಿಫಲವಾಗಿದೆ. ಪ್ರತಿಯೊಂದು ಯೋಜನೆಯಡಿ ನೂರಾರು ಅರ್ಜಿಗಳು ಆನ್‌ಲೈನ್‌ನಲ್ಲಿ ದಾಖಲಾಗಿದ್ದರೂ ಕೇವಲ 01 ಅಥವಾ 02 ಬೆರಳೆಣಿಕೆ ಗುರಿ ನಿಗದಿಪಡಿಸುತ್ತಿರುವ ಕಾರಣ ಹೆಚ್ಚಿನ ಸಂಖ್ಯೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಗೆ ಸಾಧ್ಯವಾಗುತ್ತಿಲ್ಲ. ನೂರಾರು ಅರ್ಜಿಗಳಿಗೆ ಒಂದಂಕಿಯ ಗುರಿ ನಿಗದಿಪಡಿಸುವುದು ಅವೈಜ್ಞಾನಿಕ. ಇಂತಹ ಪರಿಸ್ಥಿತಿ ಇರುವಾಗ ಆಯ್ಕೆ ಸಮಿತಿಯೇ ಅಪ್ರಸ್ತುತ ಎಂದು ಕಿಡಿಕಾರಿದರು.
ಅರ್ಹರಿಗೆ ಯೋಜನೆ ಪ್ರಯೋಜನ ತಲುಪಿಸಿ, ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಯೋಚಿಸಬೇಕು ಹಾಗೂ ಮೇಲಧಿಕಾರಿಗಳಿಗೆ ವರದಿ ಮಾಡಬೇಕು. ಇಂತಹ ಯೋಜನೆಗಳಲ್ಲಿ ಪ್ರತಿ ಯೋಜನೆಯಡಿ ವರ್ಷಕ್ಕೆ ಕನಿಷ್ಠ 10 ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡಬೇಕು ಇಲ್ಲದಿದ್ದರೆ ಆ ಯೋಜನೆಯನ್ನೇ ಸರ್ಕಾರ ರದ್ದುಪಡಿಸುವುದು ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ನಿಗಮ ಹಾಗೂ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಆಯ್ಕೆ ಸಮಿತಿ ಸದಸ್ಯರು ಮತ್ತು ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರತಿವರ್ಷ ಹೊಸದಾಗಿ ಅರ್ಜಿ ಸಲ್ಲಿಸುವ ಬದಲು ಈ ಹಿಂದೆ ನಿರ್ದಿಷ್ಟ ಯೋಜನೆಯಡಿ ಅರ್ಜಿ ಹಾಕಿ ಸೌಲಭ್ಯ ದೊರಕದೇ ಇರುವವರ ಅರ್ಜಿಗಳು ಮುಂದಿನ ವರ್ಷಗಳಲ್ಲಿ ಪರಿಗಣನೆಗೆ ಬರುವ ಹಾಗೆ ಆನ್‌ಲೈನ್ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ಮಾಡಲು ಕ್ರಮ ವಹಿಸುವುದರ ಮೂಲಕ ಅರ್ಜಿದಾರರ ಹಣ ಹಾಗೂ ಶ್ರಮ ವ್ಯರ್ಥವಾಗುವುದನ್ನು ತಪ್ಪಿಸುವಂತಾಗಬೇಕು.
ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕ