

ಕ್ವಾರಂಟೈನ್ ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಫ್ಲಾಟ್ಫಾರ್ಮ್ಗಳಲ್ಲಿ ಎಲ್ಲ ಭಾಷೆಯ ಸಿನಿಮಾಗಳ ಲಭ್ಯತೆ ಸಾಕಷ್ಟಿದೆ. ಓಟಿಟಿ ವೇದಿಕೆಯಲ್ಲಿ ಹೊಳೆ ಹರಿದಂತೆ ಸಿನಿಮಾಗಳ ರಾಶಿ ಇದೆ. ಯಾವ ಸಿನಿಮಾ ನೋಡೋದು ಬಿಡೋದು ಎಂಬ ಗೊಂದಲವೂ ಅಷ್ಟೇ ತಲೆ ತಿನ್ನುತ್ತೆ. ಇಂಥ ಹೊತ್ತಲ್ಲೆ ಸಂಬಂಧಗಳ ಬೆಲೆ ಅರಿಯುವ ಸಿನಿಮಾಗಳನ್ನು ನೋಡುವುದು ಉತ್ತಮ. ಅದರಲ್ಲೂ ಪತಿ ಪತ್ನಿ ಒಟ್ಟಿಗಿದ್ದರೆ, ಸಂಬಂಧ ಮತ್ತು ಅದರ ಮೌಲ್ಯಗಳನ್ನು ಪರಿಚಯಿಸುವ ಸಿನಿಮಾಗಳನ್ನು ನೋಡುವುದರಿಂದ ಆ ಸಂಬಂಧದ ಗಾಢತೆ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿರುತ್ತವೆ. ಆಯ್ದ ಐದು ಸಿನಿಮಾಗಳು ಮತ್ತು ಅವುಗಳಲ್ಲಿನ ಕಂಟೆಂಟ್ ಏನು ಎಂಬ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ಕ್ವೀನ್ (ಕಂಗನಾ ರಣಾವತ್)
ಕಂಗನಾ ರಣಾವತ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಕ್ವೀನ್’ ಚಿತ್ರ ಅವರ ಕರಿಯರ್ನಲ್ಲೇ ದಿ ಬೆಸ್ಟ್ ಸಿನಿಮಾ. ಮದುವೆ ನಿಶ್ಚಯ ಮಾಡಿಕೊಂಡು ಲಂಡನ್ನಲ್ಲಿರುವ ಭಾವಿ ಪತಿ ಕಡೆ ಹೋಗುವ ಕಂಗನಾ, ಅಲ್ಲಿ ಆತನಿಂದ ದೂರವಾಗುತ್ತಾಳೆ. ಇಬ್ಬರ ಮದುವೆ ಮುರಿದು ಬೀಳುತ್ತದೆ. ಕೊನೆಗೆ ಒಬ್ಬಳೇ ಹನಿಮೂನ್ ಅನುಭವಿಸುತ್ತಾಳೆ. ಆಗ ತನ್ನನ್ನು ತಾನು ಅರಿತುಕೊಳ್ಳುತ್ತಾಳೆ. ಒಂಟಿ ಜೀವನ, ಗೊತ್ತಿಲ್ಲದ ದೇಶ, ಭಾಷೆ ಎಲ್ಲವೂ ಆಕೆಯನ್ನು ಬಂಧಿಸುತ್ತದೆ. ಅದೆಲ್ಲದರಿಂದ ಆಕೆ ಹೇಗೆ ಆಚೆ ಬರುತ್ತಾಳೆ ಎಂಬುದೇ ಚಿತ್ರದ ತಿರುಳು.
ಲವ್ ಯೂ ಜಿಂದಗಿ (ಆಲಿಯಾ ಭಟ್, ಶಾರುಖ್ ಖಾನ್)
ಮಾನಸಿಕ ಸ್ಥಿಮಿತ ಕಳೆದುಕೊಂಡ ಯುವತಿಯ ಪರದಾಟ ಮತ್ತು ಆಕೆಯ ಮಾನಸಿಕ ಆರೋಗ್ಯವನ್ನು ಹೇಗೆ ಗುಣಮುಖವಾಗಿಸಬಹುದೆಂಬ ಅಂಶವನ್ನು ಲವ್ಯೂ ಜಿಂದಗಿ ಚಿತ್ರದಲ್ಲಿ ಹೇಳಲಾಗಿದೆ. ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಸಂಬಂಧಗಳ ಸುತ್ತಲೂ ಗಿರಕಿ ಹೊಡೆಯುತ್ತದೆ. ಅಷ್ಟೇ ಅಲ್ಲ ಅವುಗಳ ಮೌಲ್ಯವನ್ನು ಅರಿಯುವಿಕೆಯ ಪ್ರಕಾರಗಳನ್ನು ಈ ಸಿನಿಮಾದಲ್ಲಿ ತುಂಬಿಸಲಾಗಿದೆ.
ಥಪ್ಪಡ್ (ತಾಪ್ಸೀ ಪನ್ನು)
ಇತ್ತೀಚೆಗೆ ತೆರೆಕಂಡ ಥಪ್ಪಡ್ ಸಿನಿಮಾ ಜಾಸ್ತಿ ದಿನಗಳ ಕಾಲ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ. ಅದಕ್ಕೆ ಕಾರಣ ಕರೊನಾ ಎಂಬುದು ಎಂದು ಬಿಡಿಸಿಹೇಳಬೇಕಿಲ್ಲ. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಗಿಟ್ಟಿಸಿಕೊಂಡ ಈ ಸಿನಿಮಾ ಕಥೆಯೂ ಅಷ್ಟೇ ವಿಶಿಷ್ಟವಾಗಿದೆ. ಪಾರ್ಟಿಯೊಂದರಲ್ಲಿ ಎಲ್ಲರ ಸಮ್ಮುಖದಲ್ಲಿ ಪತ್ನಿಯ ಕೆನ್ನೆಗೆ ಪತಿ ಹೊಡೆಯುತ್ತಾನೆ. ಬಳಿಕ ಆಕೆ ವಿಚ್ಛೇದನಕ್ಕೆ ಮುಂದಾಗುತ್ತಾಳೆ. ಬಳಿಕ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ. ಹೆಣ್ಣಿನ ಮನಸು ಮತ್ತು ಆಕೆಯ ಭಾವನೆಗಳಿಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ದಿ ಸ್ಕೈ ಈಸ್ ಪಿಂಕ್ (ಪ್ರಿಯಾಂಕಾ ಚೋಪ್ರಾ, ಇರ್ಫಾನ್ ಖಾನ್)
ಕುಟುಂಬ ಮತ್ತು ಅದರ ಒಳಗಿನ ಬಂಧಗಳಲ್ಲಿಯೇ ದಿ ಸ್ಕೈ ಈಸ್ ಪಿಂಕ್ ಚಿತ್ರದ ಕಥೆ ಅಡಗಿದೆ. ಇಡೀ ಸಿನಿಮಾದ ಜೀವಾಳವೇ ಕುಟುಂಬ. ಕಾಯಿಲೆ ಮತ್ತು ಆ ಕಾಯಿಲೆಯನ್ನು ತಾತ್ಸಾರ ಮಾಡಿದಾಗ ಏನೆಲ್ಲ ಆಗುತ್ತದೆ? ಮಗಳನ್ನು ಕಳೆದುಕೊಂಡ ದಂಪತಿ ಬಳಿಕ ಎರಡನೇ ಮಗುವಿಗೂ ಅದೇ ಕಾಯಿಲೆ ಇದೆ ಎಂದು ಗೊತ್ತಾದಾಗ ಏನೆಲ್ಲ ಮಾಡುತ್ತಾರೆ? ಎಂಬುದನ್ನು ನಿರ್ದೇಶಕಿ ಶೋನಾಲಿ ಭೋಸ್ ಕಣ್ಣಿಗೆ ಕಟ್ಟಿದಂತೆ ತೆರೆಮೇಲೆ ತೋರಿಸಿದ್ದಾರೆ.
ಲಂಚ್ಬಾಕ್ಸ್ (ಇಮ್ರಾನ್ ಖಾನ್, ನಿಮ್ರತ್ ಕೌರ್)
ಅಸಂತುಷ್ಟ ಗೃಹಿಣಿ ಮತ್ತು ವಿಧುರನ ನಡುವಿನ ಕೊಂಡಿಯೇ ಈ ಲಂಚ್ಬಾಕ್ಸ್. ಹಲವು ಪ್ರಶಸ್ತಿ ಗಿಟ್ಟಿಸಿಕೊಂಡ ಈ ಚಿತ್ರದಲ್ಲಿ ಇಮ್ರಾನ್ ಖಾನ್ ಮತ್ತು ನಿಮ್ರತ್ ಕೌರ್ ಮುಖ್ಯಭೂಮಿಕೆಯಲ್ಲಿದ್ದಾರೆ. ವಿಧುರ ಮತ್ತು ಗೃಹಿಣಿಯ ನಡುವಿನ ಪ್ರೀತಿ ಪ್ರೇಮಕ್ಕೆ ಲಂಚ್ಬಾಕ್ಸ್ ಕಾರಣವಾಗುತ್ತದೆ. ಅದ್ಹೇಗೆ ಎಂಬುದನ್ನು ಸಿನಿಮಾದಲ್ಲಿ ನೋಡಿಯೇ ಸವಿಯಬೇಕು. ಜೀವನದಲ್ಲಿ ಎಲ್ಲದಕ್ಕೂ ಒಂದೇ ಚಾನ್ಸ್ ಇರುವುದಿಲ್ಲ. ಇನ್ನೊಂದು ಚಾನ್ಸ್ ಇದೆ ಎಂಬುದನ್ನು ಅರಿತುಕೊಳ್ಳಬೇಕೆಂಬುದು ಚಿತ್ರದಲ್ಲಿನ ಸಂದೇಶ.