ಕುಸಿಯುವ ಪ್ರದೇಶದಲ್ಲಿ ನಿರ್ಮಾಣಕ್ಕೆ ಕಡಿವಾಣ : ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಸೂಚನೆ : ತ್ರೈಮಾಸಿಕ ಕೆಡಿಪಿ ಸಭೆ

sabhe
ಶಾಸಕ ರಾಜೇಶ್ ನಾಯ್ಕ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಆಡಳಿತಾಧಿಕಾರಿ ಮಂಜುನಾಥ್, ಉಪತಹಸೀಲ್ದಾರ್ ನರೇಂದ್ರನಾಥ್ ಮೊದಲಾದವರಿದ್ದರು.
Published on

ಬಂಟ್ಚಾಳ: ಅಪಾಯಕಾರಿ ಗುಡ್ಡ ಪ್ರದೇಶ ಪಕ್ಕದಲ್ಲಿ ಮನೆ ಅಥವಾ ಯಾವುದೇ ಕಟ್ಟಡ ನಿರ್ಮಾಣದ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳು ಮೊದಲೇ ಪರಿಶೀಲನೆ ನಡೆಸಿ ಪರವಾನಗಿ ನೀಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಮಂಗಳವಾರ ಬಂಟ್ವಾಳ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿದರು.

ಪಿಡಬ್ಲುೃಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬಂಟ್ವಾಳ ಪ್ರವಾಸಿ ಮಂದಿರದ ಪಕ್ಕ ಗುಡ್ಡ ಜರಿದು ಅಲ್ಲಿರುವ ವಸತಿ ಸಂಕೀರ್ಣವೊಂದಕ್ಕೆ ಹಾನಿಯಾಗಿದೆ. ಸಂಕೀರ್ಣದಲ್ಲಿ ವಾಸ್ತವ್ಯವಿರುವವರ ನಿಯೋಗ ಬೆಳಗ್ಗೆ ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸುಮಾರು 50 ಲಕ್ಷ ರೂ. ಅನುದಾನ ಬೇಕಾಗಬಹುದು ಎಂದರು.

ಗುಡ್ಡವನ್ನು ಅಗೆಯುವ ಸಂದರ್ಭ ಇಳಿಜಾರಾಗಿ ಅಗೆಯುವ ಬದಲು ನೇರವಾಗಿ ಅಗೆಯಲಾಗುತ್ತದೆ. ಅಲ್ಲಿರುವ ಮರಗಳ ಬೇರು ಮಣ್ಣಿನಡಿ ಹರಡಿರುವುದರಿಂದ ಬಿರುಕುಬಿಟ್ಟು ಮಣ್ಣು ಕುಸಿಯುತ್ತದೆ. ಆ ಪ್ರದೇಶದಲ್ಲಿ ಕಟ್ಟಡ ಅಥವಾ ಮನೆ ನಿರ್ಮಿಸುವ ಮೊದಲೇ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡ ಬಳಿಕವೇ ಪರವಾನಗಿ ನೀಡಬೇಕು ಎಂದು ಶಾಸಕರು ಸೂಚಿಸಿದರು.

ಈ ಬಾರಿ ಮಳೆಯಿಂದಾಗಿ 8 ಕಡೆ ರಸ್ತೆ, 4 ಸೇತುವೆ, 2 ಕಟ್ಟಡಗಳಿಗೆ ಹಾನಿಯಾಗಿದೆ. ಇದರ ವರದಿಯನ್ನು ಜಿಲ್ಲಾಧಿಕಾರಿಗೆ ಕಳಿಸಲಾಗಿದೆ ಎಂದು ಇಂಜಿನಿಯರ್ ಸಭೆಗೆ ತಿಳಿಸಿದಾಗ, ಆಡಳಿತಾಧಿಕಾರಿ ಮಂಜುನಾಥ್ ಶಾಸಕರಲ್ಲೂ ರಸ್ತೆ ಹಾನಿಯ ಪಟ್ಟಿ ಬಂದಿದ್ದು, ಆ ಪಟ್ಟಿಯನ್ನು ಶಾಸಕರ ಗಮನಕ್ಕೂ ತಂದು ಪರಿಶೀಲಿಸುವಂತೆ ಸೂಚಿಸಿದರು.

ಜೋಳ ಬೆಳೆಸಿ

ಮಳೆಗಾಲದ ನಂತರ ನದಿ ತೀರ ಮುಳಗಡೆ ಪ್ರದೇಶವನ್ನು ಗುರುತಿಸಿ ಜಾನುವಾರುಗಳಿಗೆ ಮೇವಿಗಾಗಿ ಕೆಎಂಎಫ್ ಹಾಗೂ ಪಶುಸಂಗೋಪನಾ ಇಲಾಖೆ ಜಂಟಿಯಾಗಿ ಜೋಳ ಬೆಳೆಸುವಂತೆ ಶಾಸಕ ರಾಜೇಶ್ ನಾಯ್ಕ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೂರು ದಿನದಲ್ಲಿ ಶೂ, ಸಾಕ್ಸ್ ವಿತರಣೆ

ತಾಲೂಕಿನಲ್ಲಿ ಎಲ್ಲ ಶಾಲೆಗಳಿಗೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಿಸಲಾಗಿದೆ. ಶೂ, ಸಾಕ್ಸ್ ಗಳನ್ನು ಮೂರು ದಿನಗಳ ಒಳಗಾಗಿ ಪೂರ್ಣವಾಗಿ ವಿತರಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು. ಮಳೆಯಿಂದಾಗಿ ಹಾನಿಗೊಂಡಿರುವ 36 ಶಾಲೆಗಳ ದುರಸ್ತಿಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಯವರಿಗೆ ಕಳಿಸಲಾಗಿದೆ ಎಂದರು.

ಮಾದರಿ ಅಂಗನವಾಡಿಗೆ ತಾಕೀತು

ತಾಲೂಕಿನ ಒಂದು ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ರೂಪಿಸುವಂತೆ ಸಿಡಿಪಿಒಗೆ ರಾಜೇಶ್ ನಾಯ್ಕ ಸೂಚಿಸಿದರು. ಮಳೆಯ ಹಿನ್ನೆಲೆಯಲ್ಲಿ ಅಪಾಯದಲ್ಲಿರುವ 7 ಅಂಗನವಾಡಿಗಳ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಡಿಪಿಒ ತಿಳಿಸಿದರು.

ಈ ಬಾರಿ ತಾಲೂಕಿನಲ್ಲಿ ನಿರೀಕ್ಷೆಯಷ್ಟು ಚೆನ್ನಾಗಿ ಮಳೆ ಸುರಿದಿದೆ. ಸುಮಾರು 56 ಕಡೆ ತೋಟಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕಾಧಿಕಾರಿ ಮಾಹಿತಿ ನೀಡಿದರು. ಮಳೆಯಿಂದಾಗಿ 9 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ಉಪತಹಸೀಲ್ದಾರ್ ನರೇಂದ್ರನಾಥ್ ತಿಳಿಸಿದರು.

ಟಿಎಪಿಎಂಸಿ ಅಧ್ಯಕ್ಷ ರವೀಂದ್ರ ಕಂಬಳಿ ಸಹಿತ ವಿವಿಧ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು. ತಾ.ಪಂ ಪ್ರಭಾರ ಇಒ ಮಹೇಶ್ ಹೊಳ್ಳ ಸ್ವಾಗತಿಸಿ, ವಂದಿಸಿದರು.

ಬಂಟ್ವಾಳ ತಾಲೂಕಿನಲ್ಲಿ 165 ಮಂದಿಗೆ ಶಂಕಿತ ಡೆಂಗೆ ಬಾಧಿಸಿದ್ದು, ಈ ಪೈಕಿ 35 ಮಂದಿಗೆ ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಆಶೋಕ್ ಕುಮಾರ್ ಹೇಳಿದರು. ಮಲೇರಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದರು.

ಬಂಟ್ವಾಳದಲ್ಲಿ ಹೆಲಿಪ್ಯಾಡ್

ಬಂಟ್ವಾಳದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವರು ಪ್ರಸ್ತಾವನೆ ಇರಿಸಿದ್ದು, ಜಾಗದ ಸಮಸ್ಯೆ ಎದುರಾಗಿದೆ. ಈಗಾಗಲೇ ಒಂದು ಜಾಗ ನೋಡಿ ಅದು ಸೂಕ್ತವಾಗದೆ ಕೈಬಿಡಲಾಗಿದೆ ಎಂದು ಪಿಡಬ್ಲ್ಯೂಡಿ ಅಧಿಕಾರಿ ಮಾಹಿತಿ ನೀಡಿದರು. ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿ ಸುಮಾರು ನಾಲ್ಕು ಎಕರೆ ಜಮೀನಿದ್ದು, ಅದನ್ನು ಪರಿಶೀಲಿಸಬಹುದು ಎಂದು ಕೆಎಸ್‌ಆರ್‌ಟಿಸಿ ಬಿ.ಸಿ.ರೋಡು ಘಟಕದ ಇಸ್ಮಾಯಿಲ್ ಶಾಸಕರ ಗಮನಕ್ಕೆ ತಂದರು. ತಾಲೂಕುಮಟ್ಟದ ಸುಸಜ್ಜಿತ ಷಟ್ಲ್ ಬಾಡ್ಮಿಂಟನ್ ಮೈದಾನ ಮತ್ತು ಈಜುಕೊಳ ನಿರ್ಮಾಣಕ್ಕೂ ಜಮೀನು ಗುರುತಿಸುವಂತೆ ಶಾಸಕರು ಸೂಚನೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net