ವಿಜಯಪುರ: ಇಟ್ಟಿಗೆ ಬಟ್ಟಿಯಲ್ಲಿ ಕಾರ್ಮಿಕರನ್ನು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಕೃತ್ಯದ ಕರಾಳ ನೆನಪು ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕಬ್ಬು ಕಟಾವಿಗೆ ಸಂಬಂಧಿಸಿದ ಹಣಕಾಸಿನ ವಿಚಾರಕ್ಕೆ ತಂದೆ-ಮಗನ ಮೇಲೆ ಹಲ್ಲೆ ನಡೆದಿದೆ.
ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ಜ. 21ರಂದೇ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ಮಿಂಚಿನಾಳ ಆರ್.ಸಿ. ಗ್ರಾಮದ ರಾಜಕುಮಾರ ಲಮಾಣಿ ಮತ್ತು ಈತನ ಮಗ ಕಿರಣ ಎಂಬುವರೇ ಹಲ್ಲೆಗೆ ಒಳಗಾಗಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಖಣಾಪುರ ಎಲ್‌ಟಿ ಗ್ರಾಮದ ಶಿವಲಾಲ ಪವಾರ ಮತ್ತು ವಾಚು ಪವಾರ ಎಂಬುವರನ್ನು ಬಂಧಿಸಲಾಗಿದೆ. ಆಕಾಶ ಶಿವಲಾಲ ಪವಾರ ಸೇರಿದಂತೆ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಘಟನೆ ವಿವರ
ಹಲ್ಲೆಗೆ ಒಳಗಾದ ರಾಜಕುಮಾರ ಕಿರಾಣಿ ಅಂಗಡಿ ವ್ಯಾಪಾರ ಮಾಡುತ್ತಿದ್ದು ಈತನದ್ದೊಂಡು ಟ್ರ್ಯಾಕ್ಟರ್ ಸಹ ಇದೆ. ಮಗ ಕಿರಣ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡಿದ್ದು, ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದು ಮತ್ತು ಕಬ್ಬು ಕಟಾವಿಗೆ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಾನೆ.
ಕಳೆದ ನಾಲ್ಕು ತಿಂಗಳ ಹಿಂದೆ ಕಬ್ಬು ಕಟಾವು ಮಾಡುವ ಗ್ಯಾಂಗ್ ಕೆಲಸಕ್ಕೆ ಕಳುಹಿಸುವುದಾಗಿ ಶಿವಲಾಲ ಪವಾರ ಅವರಿಂದ 7 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದು, ಕಾಲೇಬಾಗದ ಅರವಿಂದ ಲಮಾಣಿ, ನಾಮದೇವ ರಾಠೋಡ, ಬೆಬತಾ ಚವಾಣ್ ಸೇರಿ 5 ಜೋಡಿಗಳಿಗೆ ಒಪ್ಪಿಗೆ ಪತ್ರ ಮಾಡಿ, ಕಾರ್ಮಿಕರ ಪ್ರತಿ ಜೋಡಿಗೆ ಹಣವನ್ನೂ ನೀಡಿದ್ದಾನೆ.
ಆದರೆ, ಈ ಕಾರ್ಮಿಕರು ಕಬ್ಬು ಕಟಾವಿಗೆ ಬರುವುದಾಗಿ ಹೇಳಿ ಹಣ ಪಡೆದು ಬಂದಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ಕಬ್ಬು ಕಟಾವು ಮಾಡುವುದಕ್ಕೆ ಬರಬೇಕು ಎಂದು ಕಾರ್ಮಿಕರಿಗೆ ಸೂಚಿಸಲಾಗಿತ್ತು. ಆದರೆ, ಕಾರ್ಮಿಕರು ತಮ್ಮ ಫೋನ್‌ಗಳನ್ನು ಸ್ವಿಚ್ಛ ಆ್ ಮಾಡಿಕೊಂಡು ನಾಪತ್ತೆ ಯಾಗಿದ್ದರು. ಇದರಿಂದ ಹಣ ನೀಡಿದ್ದ ಶಿವಲಾಲ ಪವಾರ ಕೋಪಗೊಂಡಿದ್ದ.
ಹೊಲದಲ್ಲಿ ಕೂಡಿ ಹಾಕಿ ಹಲ್ಲೆ
ಇದೇ ವಿಷಯವಾಗಿ ಜನವರಿ 21ರಂದು ರಾಜಕುಮಾರ ಲಮಾಣಿ ಮನೆಗೆ ಶಿವಲಾಲ ಪವಾರ ಹೋಗಿ ಕಬ್ಬು ಕಡಿಯಲು ಕಾರ್ಮಿಕರು ಬಂದಿದ್ದಾರೆ ಎಂದು ಸುಳ್ಳು ಹೇಳಿ ಬೆಳ್ಳುಬ್ಬಿಗೆ ಕರೆದಿದ್ದಾನೆ. ಅಂತೆಯೇ, ರಾಜಕುಮಾರ ಲಮಾಣಿ ಹಾಗೂ ಮಗ ಕಿರಣ ಲಮಾಣಿ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ, ಶಿವಲಾಲ ಪವಾರ ಹಾಗೂ ಇತರರು ಸೇರಿಕೊಂಡು ತಂದೆ ಹಾಗೂ ಮಗ ಇಬ್ಬರನ್ನೂ ಹೊಲದಲ್ಲಿ ಕೂಡಿ ಹಾಕಿ, ಮರಕ್ಕೆ ಕಟ್ಟಿ ಹೊಡೆದಿದ್ದಾರೆ ಎಂದು ಗಾಯಾಳು ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.