ಆ ಒಂದು ಕ್ಷಣದಿಂದ ಎಲ್ಲವೂ ಬದಲಾಯಿತು... ಲವ್​ ಕಹಾನಿ ಬಿಚ್ಚಿಟ್ಟ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು! PV Sindhu

PV Sindhu
Published on

PV Sindhu : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಉದ್ಯಮಿ ವೆಂಕಟ ದತ್ತ ಸಾಯಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಭಾನುವಾರ (ಡಿ. 22) ಉದಯಪುರದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳನ್ನು ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಿಂಧು ಅವರು 'ಹೃದಯ' ಎಮೋಜಿಯೊಂದಿಗೆ ಮದುವೆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಅಂದಹಾಗೆ ಸಿಂಧು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ವೆಂಕಟದತ್ತ ಅವರೊಂದಿಗಿನ ಪ್ರೇಮಕಥೆಯನ್ನು ಬಹಿರಂಗಪಡಿಸಿದರು. ವಿಮಾನವು ಅವರಿಬ್ಬರನ್ನು ಒಟ್ಟಿಗೆ ಸೇರಿಸಿತು ಎಂದು ಸಿಂಧು ಹೇಳಿದ್ದಾರೆ.

ವೋಗ್ ಇಂಡಿಯಾ ವರದಿಯ ಪ್ರಕಾರ, ಸಿಂಧು 2022ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ವೆಂಕಟ ದತ್ತ ಸಾಯಿಯನ್ನು ವಿಮಾನದಲ್ಲಿ ಭೇಟಿಯಾದರು. ಎರಡು ವರ್ಷಗಳ ಹಿಂದೆ ನಾವು ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿದೆವು. ಆ ಪ್ರಯಾಣದಿಂದ ಎಲ್ಲವೂ ಬದಲಾಯಿತು. ಆ ಪಯಣ ನಮ್ಮನ್ನು ಹತ್ತಿರ ತಂದಿತು. ಇದೆಲ್ಲವೂ ಮೊದಲ ನೋಟದಲ್ಲೇ ಪ್ರೀತಿ ಅನಿಸಿತು. ಅಂದಿನಿಂದ ನಮ್ಮ ಪ್ರೇಮ ಪಯಣ ಶುರುವಾಯಿತು ಎಂದು ಸಿಂಧು ಲವ್​ ಸ್ಟೋರಿ ಹೇಳಿದ್ದಾರೆ.

ನಮ್ಮ ಇತಿಹಾಸದ ಅತ್ಯಂತ ಮಹತ್ವದ ಘಟನೆಯನ್ನು ವಿನಮ್ರ ರೀತಿಯಲ್ಲಿ ಆಚರಿಸಲು ನಾವು ನಿರ್ಧರಿಸಿದೆವು. ಇದು ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ವೃತ್ತಿಪರ ಕ್ರೀಡಾಪಟುವಾಗಿ ನಾನು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದರೂ, ನನ್ನ ಜೀವನದಲ್ಲಿ ಈ ಮಹತ್ವದ ಘಟನೆಗಾಗಿ ನಾನು ಎಲ್ಲವನ್ನೂ ಮುಂಚಿತವಾಗಿ ಯೋಜಿಸಿದ್ದೆ. ಅದಕ್ಕೆ ದತ್ತ ಕೂಡ ಸಹಾಯ ಮಾಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಸಿಂಧು ಹೇಳಿದ್ದಾರೆ.

ಅಂದಹಾಗೆ ಕಳೆದ ಭಾನುವಾರ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಹಾಗೂ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತ ಸಾಯಿ ದಂಪತಿಗೆ ಮಂಗಳವಾರ ರಾತ್ರಿ ಹೈದರಾಬಾದ್​ನಲ್ಲಿ ನಡೆದ ಆರತಕ್ಷತೆಯಲ್ಲಿ ಗಣ್ಯರು ಶುಭಹಾರೈಸಿದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ, ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಜಿತ್​ ಕುಮಾರ್​, ಅರ್ಜುನ್​ ಸರ್ಜಾ, ಮೃಣಾಲ್​ ಠಾಕೂರ್​, ರೋಜಾ, ಗಾಯಕಿ ಮಂಗ್ಲಿ, ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್​ ತಾರೆಯರಾದ ಚಿರಾಗ್​ ಶೆಟ್ಟಿ, ಸಾತ್ವಿಕ್​ ಸಾಯಿರಾಜ್​ ಸಹಿತ ಅನೇಕರು ನವದಂಪತಿಯನ್ನು ಹರಸಿದರು.

29 ವರ್ಷದ ಸಿಂಧು ಮದುವೆಯ ನಂತರವೂ ಬ್ಯಾಡ್ಮಿಂಟನ್​ನಲ್ಲಿ ಮುಂದುವರಿಯಲಿದ್ದು, 2027ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ವರೆಗೆ ಆಡುವ ಹಂಬಲ ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net