Bagalkote Soldier : ಹಿಮಾಚಲ ಪ್ರದೇಶದಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಯೋಧನಿಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಪತ್ನಿಯನ್ನು ವಾಪಸ್ ಮನೆಗೆ ಕಳುಹಿಸಿ ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳಿದ ಯೋಧನ ಜೀವನದಲ್ಲಿ ದೊಡ್ಡ ದುರಂತವೇ ಸಂಭವಿಸಿದೆ. ಇತ್ತ ಪತ್ನಿ ಮನೆಗೆ ಮರಳುತ್ತಿದ್ದಂತೆ ಅತ್ತ ಯೋಧ ಹುತಾತ್ಮರಾಗಿದ್ದಾರೆ. ಈ ಒಂದು ಘಟನೆ ವಿಧಿಯ ಕ್ರೂರತನಕ್ಕೆ ಸಾಕ್ಷಿಯಾಗಿದೆ.
ನಿನ್ನೆ (ಡಿ.24) ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಸೇನಾ ಟ್ರಕ್ನಲ್ಲಿ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ 300 ಅಡಿ ಆಳದ ಪ್ರಪಾತಕ್ಕೆ ಬಿದ್ದು ಹುತಾತ್ಮರಾದ ಐವರು ಯೋಧರ ಪೈಕಿ ಮೂವರು ಕರ್ನಾಟಕದವರು. ಅವರನ್ನು ಬಾಗಲಕೋಟೆ ಮಹಾಲಿಂಗಪುರದ ಮಹೇಶ್ ನಾಗಪ್ಪ ಮರಿಗೊಂಡ (25), ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45) ಹಾಗೂ ಕುಂದಾಪುರದ ಕೋಟೇಶ್ವರ ಬಿಜಾಡಿಯ ಅನೂಪ್ (33) ಎಂದು ಗುರುತಿಸಲಾಗಿದೆ.
ಸೇನೆಗೆ ಸೇರಿ 6 ವರ್ಷ
ಯೋಧ ಮಹೇಶ್ ನಾಗಪ್ಪ ಮರಿಗೊಂಡ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೆಂಡರ್ ಎಂಬ ಪ್ರದೇಶಕ್ಕೆ ಸೇನಾ ಟ್ರಕ್ನಲ್ಲಿ ಕರ್ತವ್ಯಕ್ಕೆ ಹೊರಟಿದ್ದರು. ಈ ವೇಳೆ ಪ್ರಪಾತಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ. ಮಹೇಶ್ ಅವರು ಸೇನೆಗೆ ಸೇರಿ 6 ವರ್ಷ 6 ತಿಂಗಳು ಆಗಿತ್ತು. ಯೋಧನಿಗೆ ಓರ್ವ ತಮ್ಮ, ಓರ್ವ ತಂಗಿ ಹಾಗೂ ತಾಯಿ ಶಾರದಾ ಇದ್ದಾರೆ. ಲಕ್ಷ್ಮೀ ಎಂಬ ಯುವತಿ ಜತೆ ಮದುವೆಯಾಗಿ ಮೂರು ವರ್ಷ ಆಗಿತ್ತು. ಕುಟುಂಬಕ್ಕೆ ಮಹೇಶ್ ಹಿರಿಯ ಪುತ್ರರಾಗಿದ್ದರು. ಯೋಧನ ಪಾರ್ಥೀವ ಶರೀರ ನಾಳೆ ಬೆಳಗಾವಿ ಮೂಲಕ ಮನೆ ತಲುಪಲಿದೆ.
ಪತ್ನಿ ಮನೆಗೆ ಯೋಧ ಬಾರದ ಲೋಕಕ್ಕೆ
ಮಹೇಶ್ ಅವರು ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೂರು ತಿಂಗಳ ಹಿಂದೆ ಪತ್ನಿ ಲಕ್ಷ್ಮೀ, ಮಹೇಶ್ ಜತೆ ಇದ್ದರು. ಮಹೇಶ್ ಅವರಿಗೆ ಹಿಮಾಚಲ ಪ್ರದೇಶದಿಂದ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿತ್ತು. ಹೀಗಾಗಿ ಪತ್ನಿ ಲಕ್ಷ್ಮೀಯನ್ನು ಊರಿಗೆ ಕಳುಹಿಸಿ, ತಾನು ಕರ್ವ್ಯಕ್ಕೆ ಹೊರಟಿದ್ದ. ನಿನ್ನೆ ಬೆಳಗ್ಗೆಯಷ್ಟೆ ಲಕ್ಷ್ಮೀ ಅವರು ಮಹಾಲಿಂಗಪುರಕ್ಕೆ ಬಂದಿದ್ದಾರೆ. ಬಳಿಕ ಪೋನ್ನಲ್ಲಿ ಮಹೇಶ್ ಜತೆ ಮಾತನಾಡಿದ್ದಾರೆ. ಆದರೆ, ರಾತ್ರಿ ಅಷ್ಟೊತ್ತಿಗೆ ವಾಹನ ಪ್ರಪಾತಕ್ಕೆ ಬಿದ್ದು ಯೋಧ ಮಹೇಶ್ ಹುತಾತ್ಮರಾಗಿದ್ದಾರೆ. ಈ ಸುದ್ದಿ ಕೇಳಿ ಲಕ್ಷ್ಮೀಗೆ ಆಘಾತವಾಗಿದೆ.
ಮರಣ ಸುದ್ದಿ ಹೊತ್ತು ತಂದ ಸ್ನೇಹಿತ
ಮಹೇಶ್ ಅವರು ಕಳೆದ ಆಗಸ್ಟ್ ತಿಂಗಳಲ್ಲಿ ಮಹಾಲಿಂಗಪುರಕ್ಕೆ ರಜೆಗಾಗಿ ಬಂದಿದ್ದರು. ಆದರೆ, ಈಗ ಹುತಾತ್ಮರಾಗಿ ಮರಳುತ್ತಿದ್ದಾರೆ. ಮಹೇಶ್ ಅವರು ದ್ವಿತೀಯ ಪಿಯುಸಿ ಮುಗಿಸಿ ಸೇನೆ ಸೇರಿದ್ದರು. ಮನೆಗೆ ಆತನೆ ಹಿರಿಮಗ. ವಾಹನ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಸುದ್ದಿಯನ್ನು ಸೇನೆಯಲ್ಲಿರುವ ಅಥಣಿ ಮೂಲದ ಆತನ ಸ್ನೇಹಿತ ಬಂದು ಹೇಳಿದಾಗ ಮಾಹಿತಿ ಗೊತ್ತಾಗಿದೆ. ಮಹೇಶ್ ಅವರ ಸ್ನೇಹಿತ ಇಂದು ಬೆಳಗ್ಗೆ ಮಹಾಲಿಂಗಪುರಕ್ಕೆ ಬಂದು ವಿಷಯ ತಿಳಿಸಿದ ಎಂದು ಯೋಧನ ಮಹೇಶನ ಚಿಕ್ಕಪ್ಪ ಮಹಾಲಿಂಗಪ್ಪ ಮರಿಗೊಂಡ “ವಿಜಯವಾಣಿ”ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: 2025ರಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ ಈ 3 ರಾಶಿಯವರು! ಬರಲಿದೆ ಅನಿರೀಕ್ಷಿತ ಆದಾಯ | Horoscope 2025
ಶಾಸಕರ ಸಾಂತ್ವಾನ
ಮೃತ ಯೋಧರ ಕುಟುಂಬಕ್ಕೆ ಶಾಸಕ ಸಿದ್ದು ಸವದಿ ಸಾಂತ್ವನ ಹೇಳಿದ್ದಾರೆ. ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಐದು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಮೂವರು ಕರ್ನಾಟಕದವರು ಇದ್ದಾರೆ. ಬಾಗಲಕೋಟೆಯ ಮಹೇಶ್ ಮರಿಗೊಂಡ ಎಂಬ 25 ವರ್ಷದ ಯುವಕ ದೇಶ ಸೇವೆಯಲ್ಲಿ ವೀರ ಮರಣ ಹೊಂದಿದ್ದಾನೆ. ಅವನ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ಭಗವಂತ ಕೊಡಲಿ. ನಾನೂ ಸಹಿತ ಜಮ್ಮು ಕಾಶ್ಮೀರದ ಸೇನಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಂದು ಸಾಯಂಕಾಲ ಎಲ್ಲ ಪ್ರಕ್ರಿಯೆ ಮುಗಿಸಿ, ಅಲ್ಲಿಂದ ಏರ್ಲಿಫ್ಟ್ ಮಾಡಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬರುತ್ತೆ ಎಂದಿದ್ದಾರೆ. ಇಂದು ರಾತ್ರಿ ಬೆಳಗಾವಿ ತಲುಪಿದರೆ, ನಾಳೆ ಬೆಳಗ್ಗೆ ಮಹಾಲಿಂಗಪುರಕ್ಕೆ ತರಲಾಗುತ್ತದೆ. ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಸಾಯಂಕಾಲ ಸರ್ಕಾರಿ ಗೌರವದೊಂದಿಗೆ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದರು.
ಸಿಎಂ ಸಂತಾಪ
ಜಮ್ಮು ಕಾಶ್ಮೀರದ ಪೂಂಚ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು.
ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ದೇಶ ಸೇವೆಗಾಗಿ ಜೀವ… pic.twitter.com/K5mDBIn8sS
— Siddaramaiah (@siddaramaiah) December 25, 2024