

Morning habits : ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಏನೆಂದರೆ, ಪಕ್ಕದಲ್ಲೇ ಇರುವ ತಮ್ಮ ಮೊಬೈಲ್ ಫೋನ್ ಅನ್ನು ನೋಡುವುದು. ಮಧ್ಯರಾತ್ರಿಯವರೆಗೂ ಫೋನ್ನಲ್ಲಿ ಕಳೆದರೂ ಬೆಳಗ್ಗೆ ಎದ್ದ ತಕ್ಷಣ ಮೊದಲು ವಾಟ್ಸ್ಆ್ಯಪ್, ಫೇಸ್ಬುಕ್ಗಳನ್ನು ಚೆಕ್ ಮಾಡದೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಇದು 100ರಲ್ಲಿ ಶೇ.80 ರಷ್ಟು ಜನರ ಅಭ್ಯಾಸವಾಗಿದೆ.
ಆದರೆ, ಈ ಅಭ್ಯಾಸವು ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ಬಳಸುವುದರಿಂದ ಒತ್ತಡ ಮತ್ತು ಆತಂಕ ಹೆಚ್ಚಾಗಬಹುದು ಮತ್ತು ನಿಮ್ಮ ಬೆಳಗಿನ ದಿನಚರಿಯನ್ನೇ ಅಡ್ಡಿಪಡಿಸಬಹುದು ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ.
ಅಂದಹಾಗೆ ಬೆಳಗ್ಗೆ ಎದ್ದ ತಕ್ಷಣ ತನ್ನ ಫೋನ್ ಬಳಸುವ ವ್ಯಕ್ತಿಗೆ ಅನೇಕ ಅಡ್ಡ ಪರಿಣಾಮಗಳು ಬೀರುತ್ತವೆ. ಅದರಲ್ಲಿ ಅತ್ಯಂತ ಮುಖ್ಯವಾದ ವಿಷಯವೇನೆಂದರೆ, ಮೆದುಳಿನ ಕಾರ್ಯನಿರ್ವಹಣೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ, ನಿಮ್ಮ ಸೃಜನಶೀಲತೆಯ ಮೇಲೂ ಪರಿಣಾಮ ಬೀರುತ್ತದೆ. ಇದಿಷ್ಟೇ ಅಲ್ಲದೆ, ಆತಂಕ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ನೋಡುತ್ತೀರಿ ಅಂದುಕೊಳ್ಳಿ. ನೀವು ಮೊದಲು ನೋಡುವುದು ದುರಂತದ ಸುದ್ದಿಯಾದರೆ, ಅದು ನಿಮ್ಮನ್ನು ಇಡೀ ದಿನ ಒತ್ತಡಕ್ಕೆ ಸಿಲುಕಿಸುತ್ತದೆ.
ನಿದ್ರೆಯ ಮೇಲೆಯೂ ಪರಿಣಾಮ ಬೀರುತ್ತದೆ. ಅತಿಯಾಗಿ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮೆಲಟೋನಿನ್ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಅಂದಹಾಗೆ ಈ ಮೆಲಟೋನಿನ್ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಆದ್ದರಿಂದ, ಫೋನ್ ಬಳಕೆ ನಿಮ್ಮ ನಿದ್ರೆಯ ಚಕ್ರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಮತ್ತೊಂದು ಪ್ರಮುಖ ವಿಷಯವೆಂದರೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು ನಿಮ್ಮ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಮೊಬೈಲ್ ಕಿರಣಗಳು ನಿಮ್ಮ ಕಣ್ಣುಗಳನ್ನು ಆಯಾಸಗೊಳಿಸುತ್ತದೆ. ಅದರಿಂದ ನಿಮ್ಮ ದೃಷ್ಟಿ ದುರ್ಬಲಗೊಳ್ಳುತ್ತದೆ. ಅಲ್ಲದೆ, ತಲೆನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಬೇರೆ ಯಾವುದರತ್ತ ಗಮನ ಹರಿಸದೆ ನಿಮ್ಮ ಫೋನ್ ನೋಡುವುದು ನೀವು ಅದಕ್ಕೆ ಅಡಿಕ್ಟ್ ಆಗಿರುವ ಸಂಕೇತವಾಗಿದೆ. ಮತ್ತೊಂದು ಅಡ್ಡ ಪರಿಣಾಮವೆಂದರೆ ನಿಮ್ಮ ದಿನಚರಿಯನ್ನೇ ಬದಲಾಯಿಸುತ್ತದೆ. ಫೋನ್ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ, ಬೆಳಗಿನ ದಿನಚರಿಯು ವಿಳಂಬವಾಗುವ ಸಾಧ್ಯತೆಯಿದೆ. ಉದಾಹರಣೆಗೆ, ಒಂದು ರೀಲ್ ವೀಕ್ಷಿಸಲು ಆರಂಭಿಸಿದರೆ ನೋಡುತ್ತಲೇ ಇರುತ್ತಿರಿ. ಇದರಿಂದ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇದರಿಂದ ನಿಮ್ಮ ದಿನಚರಿಯೇ ಏರುಪೇರಾಗುತ್ತದೆ.
ಎಷ್ಟೋ ಜನ ಎದ್ದ ಕೂಡಲೇ ಫೋನ್ ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಾರೆ. 61ರಷ್ಟು ಜನರು ತಮ್ಮ ಫೋನ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ. ಅನೇಕ ಜನರು ತಮ್ಮ ಫೋನ್ ಇಲ್ಲದೆ ಶೌಚಾಲಯಕ್ಕೆ ಹೋಗಲು ಸಾಧ್ಯವಿಲ್ಲ ಅನ್ನೋ ಪರಿಸ್ಥಿತಿ ತಂದುಕೊಂಡಿದ್ದಾರೆ. ಇದಲ್ಲದೆ, ಫೋನ್ ಹಿಡಿದುಕೊಂಡು ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಶೌಚಾಲಯದಲ್ಲಿ ಹಲವಾರು ರೀತಿಯ ಸೂಕ್ಷ್ಮಜೀವಿಗಳಿವೆ. ಅಲ್ಲಿ ಹೆಚ್ಚು ಸಮಯ ಕಳೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. (ಏಜೆನ್ಸೀಸ್)