ಸುಳ್ಯ: ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಪೌಷ್ಟಿಕ ಪುನರ್ವಸತಿ ಕೇಂದ್ರದ ಪ್ರಯೋಜನ ಹೆಚ್ಚಿನ ಜನರಿಗೆ ಲಭಿಸುವಂತಾಗಲು ಮುಂದಿನ ವಾರವೇ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಸುಳ್ಯ ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ಆರೋಗ್ಯಾಧಿಕಾರಿ, ಸಿಡಿಪಿಒ ಮತ್ತು ವೈದ್ಯರ ಸಭೆ ಕರೆಯಲಾಗುವುದು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಶುಕ್ರವಾರ ಹೇಳಿದರು.
ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ, ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
3 ವರ್ಷಗಳ ಹಿಂದೆ ಪ್ರಾರಂಭ
ಮಕ್ಕಳಲ್ಲಿರುವ ಅಪೌಷ್ಟಿಕತೆ ಗುರುತಿಸಿ ನಿವಾರಿಸುವ ಯೋಜನೆಯ ಭಾಗವಾಗಿ ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರವನ್ನು ಮೂರು ವರ್ಷದ ಹಿಂದೆ ಆರಂಭಿಸಲಾಗಿತ್ತು. ಜಿಲ್ಲೆಯಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆ ಹೊರತು ಪಡಿಸಿದರೆ ಪೌಷ್ಟಿಕ ಪುನರ್ವಸತಿ ಕೇಂದ್ರ ಸುಳ್ಯದಲ್ಲಿ ಮಾತ್ರ ಇದ್ದು ತಾಲೂಕುಮಟ್ಟದಲ್ಲಿ ಕಾರ್ಯಾಚರಿಸುವ ಏಕೈಕ ಕೇಂದ್ರ ಇದಾಗಿದೆ. ಆರು ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆ ಗುರುತಿಸುವಿಕೆ, ಚಿಕಿತ್ಸೆ ಹಾಗೂ ಪುನಃಶ್ಚೇತನ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆ ಸಂಬಂಧಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಲ್ಲಿರುವ ಮಾಹಿತಿ ಪ್ರಕಾರ ಯಾವ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ ಎನ್ನುವುದನ್ನು ಗಮನಿಸಿ ಅಂತಹವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲು ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.