

PM: ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಹೋಗುವಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಕಾರಿನಲ್ಲಿ (ಔರೊಸ್ ಲಿಮೋಸಿನ್) ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಡೆಸಿದ ಮಾತುಕತೆಯ ಬಗ್ಗೆ ಪುಟಿನ್ ಇದೀಗ ಬಹಿರಂಗಗೊಳಿಸಿದ್ದಾರೆ.
ತಮ್ಮ ಕಾರಿನಲ್ಲಿ ಮೋದಿ ಜತೆ 45 ನಿಮಿಷಕ್ಕೂ ಅಧಿಕ ಮಾತುಕತೆ ನಡೆಸಿದ್ದ ಪುಟೀನ್, ಇಬ್ಬರ ನಡುವೆ ನಡೆದ ಸಂಭಾಷಣೆ ಬಗ್ಗೆ ಮೌನ ಮುರಿದಿದ್ದಾರೆ.
"ಇದು ರಹಸ್ಯವಲ್ಲ, ನಾವು ಅಲಾಸ್ಕಾದಲ್ಲಿ ಏನು ಮಾತನಾಡಿದ್ದೇವೆಂದು ನಾನು ಅವರಿಗೆ (ಮೋದಿ) ಹೇಳಿದೆ" ಎಂದು ವ್ಲಾಡಿಮಿರ್ ಪುಟಿನ್ ಚೀನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ. ಕಾರಿನಲ್ಲಿ ನಡೆದ ಮಾತು ಕತೆ ಬಗ್ಗೆ ಸಂಪೂರ್ಣವಾಗಿ ತಿಳಿಸದಿದ್ದರೂ, ಅಲಾಸ್ಕಾದಲ್ಲಿ ನಡೆದ ಭೇಟಿ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸಲು ಪುಟಿನ್ 10 ನಿಮಿಷ ಕಾಯುತ್ತಿದ್ದರು ಎಂದು ಎನ್ಡಿಟಿವಿ ವರದಿ ಮಾಡಿದೆ. ಇಬ್ಬರು ನಾಯಕರು ತಮ್ಮ ತಂಡದ ಸದಸ್ಯರನ್ನು ಸೇರಿಕೊಳ್ಳಲು ಹೊಟೇಲ್ಗೆ ಹೋಗುವ ದಾರಿಯಲ್ಲಿ ತಮ್ಮ ಮುಖಾಮುಖಿ ಸಂವಾದವನ್ನು ಮುಂದುವರೆಸಿದರು ಎಂದು ರಷ್ಯಾದ ರಾಷ್ಟ್ರೀಯ ರೇಡಿಯೋ ಸ್ಟೇಷನ್ ವೆಸ್ಟಿಎಫ್‌ಎಂ ಪಿಟಿಐ ವರದಿ ಮಾಡಿದೆ. ಆದಾಗ್ಯೂ ಹೊಟೇಲ್ ತಲುಪಿದ ನಂತರ ಕೂಡ ಕಾರಿನಿಂದ ಹೊರಗೆ ಇಳಿಯದೇ 50 ನಿಮಿಷಗಳ ಕಾಲ ಮಾತುಕತೆ ಮುಂದುವರೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)