ಉತ್ತರ ಭಾರತದಲ್ಲಿ 'ಪುಷ್ಪ 2' ಪ್ರದರ್ಶನ ಸ್ಥಗಿತ? ಬಾಕ್ಸ್ ಆಫೀಸ್​ ಹಿಟ್​ ಚಿತ್ರಕ್ಕೆ ಎದುರಾಯಿತೇ ಸಂಕಷ್ಟ?

ವಿಜಯವಾಣಿ - 2024-12-20T124633.105
Published on

Pushpa 2: ಡಿ.05ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿಗಳಲ್ಲಿ ಅಪ್ಪಳಿಸಿದ ಟಾಲಿವುಡ್​ ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಭಾರತೀಯ ಸಿನಿಮಾಗಳ ಪೈಕಿ ಮುಂಚೂಣಿಯಲ್ಲಿದೆ. ಪ್ರಸ್ತುತ ಹಲವಾರು ಥಿಯೇಟರ್​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಲ್ಲು ಅರ್ಜುನ್​ ಚಿತ್ರಕ್ಕೆ ಉತ್ತರ ಭಾರತದ ಪಿವಿಆರ್, ಐನಾಕ್ಸ್​ ಚಿತ್ರಮಂದಿರಗಳಿಂದ ದೊಡ್ಡ ಹೊಡೆತ ಬಿದ್ದಿದೆ.

ರಿಲೀಸ್ ಆದ ಮೊದಲ ವಾರದ ಅಂತ್ಯಕ್ಕೆ 1000 ಕೋಟಿ ರೂ. ಗಳಿಕೆ ಕಂಡ 'ಪುಷ್ಪ 2 ದಿ ರೂಲ್'​, ಸಾರ್ವಕಾಲಿಕ ದೊಡ್ಡ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಒಂದಾಗಿದೆ. ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲೂ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿರುವ ಅಲ್ಲು ಅರ್ಜುನ್​ ಸಿನಿಮಾವನ್ನು ಉತ್ತರ ಭಾರತದ ಬಹುತೇಕ ಪಿವಿಆರ್​, ಐನಾಕ್ಸ್ ಸಂಸ್ಥೆಗಳು ತಮ್ಮ ಚಿತ್ರಮಂದಿರದಿಂದ ಒಂದೆರೆಡು ದಿನ ತೆಗೆದು ಹಾಕಿತ್ತು. ಇದಕ್ಕೆ ಕಾರಣ ಚಿತ್ರದ ನಿರ್ಮಾಪಕರೊಂದಿಗಿನ ಒಪ್ಪಂದದ ವಿಷಯ. ಆದರೆ, ಇಂದು ಈ ಸಮಸ್ಯೆ ಬಗೆಹರಿದಿದೆ ಎಂದು ವರದಿ ಉಲ್ಲೇಖಿಸಿದೆ.

ಏನಿದು ಸಮಸ್ಯೆ

ಗುರುವಾರ (ಡಿ.19) ರಾತ್ರಿ, ಸಿನಿ ವ್ಯಾಪಾರ ವಿಶ್ಲೇಷಕರಾದ ಮನೋಬಾಲಾ ವಿಜಯಬಾಲನ್ ಅವರು, ನಾಳೆಯಿಂದ ಉತ್ತರ ಭಾರತದ ಎಲ್ಲಾ ಪಿವಿಆರ್​, ಐನಾಕ್ಸ್ ಮಲ್ಟಿಪ್ಲೆಕ್ಸ್​ ಚಿತ್ರಮಂದಿರದಿಂದ ಪುಷ್ಪ 2 ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದರು. ಇಂದು ಅದರ ಬೆಳವಣಿಗೆ ಕುರಿತು ಮತ್ತೊಂದು ಮಾಹಿತಿ ಹಂಚಿಕೊಂಡ ಅವರು, ಸದ್ಯ ಎರಡು ಪಾರ್ಟಿಗಳ ನಡುವೆ ಒಪ್ಪಂದದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಬಹಿರಂಗಪಡಿಸಿದರು. ಒಪ್ಪಂದದ ಸಮಸ್ಯೆ ಬಗೆಹರಿದ ಬೆನ್ನಲ್ಲೇ ನಗರದಲ್ಲಿ ನಿಧಾನವಾಗಿ ಒಂದೊಂದೇ ಚಿತ್ರಮಂದಿರ ಪುಷ್ಪ 2 ಪ್ರದರ್ಶನವನ್ನು ಆರಂಭಿಸಿದೆ ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net