

ಬೆಂಗಳೂರು: ಹಾಸ್ಯ ಕಲಾವಿದೆ ಇಂದುಶ್ರೀ ರವೀಂದ್ರ ತಾಯಿ ಆಗುತ್ತಿದ್ದಾರೆ. ಸೀಮಂತ ಕಾರ್ಯಕ್ರಮ ನಡೆದಿದ್ದು, ಈ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಾತನಾಡೋ ಗೊಂಬೆಗಳ ಜತೆಗೆ ಇಡಿ ಜಗತ್ತನ್ನೇ ಸುತ್ತಿರುವ ಇಂದುಶ್ರೀ ರವೀಂದ್ರ, ತಮ್ಮ ವಿಶಿಷ್ಠ ಕಲೆಗೆ ವಿಪರೀತ ಫೇಮಸ್. ಭಾರತದ ಏಕೈಕ ಮಹಿಳಾ ವೆಂಟ್ರಿಲೋಕ್ವಿಸ್ಟ್(ಧ್ವನಿಮಾಯೆ) ಇಂದುಶ್ರೀ ಸೀಮಂತದಲ್ಲಿ ಕುಟುಂಬ ಸದಸ್ಯರಷ್ಟೇ ಮಾತ್ರವಲ್ಲದೆ ಈ ಸಂಭ್ರಮದಲ್ಲಿದ್ದವರು ಅವರ ಕೋಕಿಲ ಅಜ್ಜಿ ಹಾಗೂ ತಾತ ಗೊಂಬೆಗಳು.
ಇಂದುಶ್ರೀ ತಮ್ಮ ಸೀಮಂತದಲ್ಲೂ ಧ್ವನಿಮಾಯೆಯ ಹಾಸ್ಯ ಮೆರೆದಿದ್ದು, ಕೋಕಿಲ ಅಜ್ಜಿ ಮತ್ತು ತಾತ ಗೊಂಬೆಗಳು ಗರ್ಭಿಣಿ ಇಂದುವನ್ನು ಮಜವಾಗಿ ಮಾತನಾಡಿಸಿವೆ.
ತಾತ ಇಂದು ಬಳಿ ಅಚ್ಚರಿಯ ಪ್ರಶ್ನೆಯೊಂದನ್ನು ಕೇಳಿದ್ದಾರೆ, 'ಏನಮ್ಮಾ ಮಗು ಹುಟ್ಟಿದ್ಮೇಲೆ ತಿರ್ಗಾ ಹೊಟ್ಟೆಯೊಳಗೆ ಹಾಕ್ಕೊಂಡು ಹೋಗಲ್ವಾ ನೀನು' ಎಂದು ತಮ್ಮ ಡೌಟ್ ಬಿಚ್ಚಿಟ್ಟಿದ್ದಾರೆ. 'ಇದೇನ್ ತಾತ, ಯಾರ್ ತಾನೇ ಹುಟ್ಟಿದ ಮಗುನ್ನ ವಾಪಸ್ ಹೊಟ್ಟೆಗೆ ಹಾಕಿಕೊಳ್ತಾರೆ' ಅಂದಿದ್ದಕ್ಕೆ ಘಾಟಿ ತಾತ, 'ಪ್ರೋಗ್ರಾಂ ಮುಗುದ್ಮೇಲೆ ಎಲ್ಲ ಗೊಂಬೆಗಳನ್ನು ಡಬ್ಬದಲ್ಲಿ ಹಾಕಿಕೊಂಡು ಹೋಗೋ ತರಾ ಮಗುನ್ನೂ ಹಾಕಿಕೊಳ್ತ್ಯೇನೋ ಅನ್ಕೊಂಡೆ' ಅಂತಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ತಾತನ ಈ ಪ್ರಶ್ನೆ ಸಮಂಜಸವಾಗೇ ಇದೆ ಎಂದು ಕೆಲ ಅಭಿಮಾನಿಗಳು ಇಂದುವಿನ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.