ಈ ಒಂದು ಗ್ರಾಮದಲ್ಲಿ ಲವ್​ ಮ್ಯಾರೇಜ್​ ಬ್ಯಾನ್​! ಹೀಗಿದೆ ನೋಡಿ ಅಚ್ಚರಿಯ ಕಾರಣ... Love Marriages

Love Marriages
Published on

Love Marriages : ಈ ಆಧುನಿಕ ಯುಗದಲ್ಲಿ ಹೆಚ್ಚಿನ ಜನರು ಪ್ರೀತಿಸಿ ಮದುವೆಯಾಗಲು ಬಯಸುತ್ತಾರೆ. ಅನೇಕ ಕುಟುಂಬಗಳು ಕೂಡ ಪ್ರೇಮ ವಿವಾಹಕ್ಕೆ ಅನುಮತಿ ನೀಡುತ್ತಿವೆ. ಆದರೆ, ಈ ಮೊದಲು ಪ್ರೇಮ ವಿವಾಹ ಅಂದರೆ, ಅದನ್ನು ವಿವಾದ ರೀತಿ ನೋಡಲಾಗುತ್ತಿತ್ತು. ಎಲ್ಲಿ ಲವ್​ ಮಾಡಿಬಿಡುತ್ತಾರೋ ಅಂತ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಸಹ ಹೆದರುತ್ತಿದ್ದರು. ಆದರೆ, ಇಂದು ಜನರ ಮನಸ್ಥಿತಿ ಬದಲಾಗಿದೆ. ಹೀಗಾಗಿಯೇ ಪ್ರೇಮ ವಿವಾಹ ಪ್ರಕರಣಗಳು ಇಂದು ಹೆಚ್ಚಾಗುತ್ತಿವೆ.

ತಾಜಾ ಸಂಗತಿ ಏನೆಂದರೆ, ಪ್ರೇಮ ವಿವಾಹಗಳು ತುಂಬಾ ಸಾಧಾರಣವಾಗಿರುವ ಈ ಆಧುನಿಕ ಯುಗದಲ್ಲೂ ಪ್ರೀತಿ ಮತ್ತು ಪ್ರೇಮ ವಿವಾಹವನ್ನು ವಿರೋಧಿಸುವ ಹಳ್ಳಿ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಪ್ರೇಮ ವಿವಾಹವನ್ನು ವಿರೋಧಿಸುವ ಹಳ್ಳಿಯ ಸುದ್ದಿಯೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಗ್ರಾಮ ಪಂಜಾಬ್‌ನಲ್ಲಿದೆ. ಮೊಹಾಲಿ ಜಿಲ್ಲೆಯ ಮನಕ್‌ಪುರ ಗ್ರಾಮದ ಗ್ರಾಮಸ್ಥರು ಜುಲೈ 31 ರಂದು ಒಂದು ಕಾನೂನನ್ನು ಜಾರಿಗೆ ತಂದಿದೆ.

ಹೊಸ ಕಾನಿನ ಪ್ರಕಾರ, ಕುಟುಂಬಗಳ ಒಪ್ಪಿಗೆಯಿಲ್ಲದ ವಿವಾಹಗಳನ್ನು ನಿಷೇಧಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ತಮ್ಮ ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾಗುವ ದಂಪತಿ ಹಳ್ಳಿಯಲ್ಲಿ ಅಥವಾ ಹತ್ತಿರದ ಪ್ರದೇಶಗಳಲ್ಲಿ ವಾಸಿಸಲು ಅವಕಾಶವಿಲ್ಲ. ಅಂತಹ ದಂಪತಿಯನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವ ಗ್ರಾಮಸ್ಥರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮದ ಮುಖ್ಯಸ್ಥ ದಲ್ವೀರ್ ಸಿಂಗ್, ಇದು ಶಿಕ್ಷೆಯ ಕ್ರಮವಲ್ಲ. ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ಗ್ರಾಮಸ್ಥರ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ 26 ವರ್ಷದ ಯುವಕ ಮತ್ತು ದಲ್ವೀರ್​ ಸಿಂಗ್​ ಅವರ 24 ವರ್ಷದ ಸಂಬಂಧಿ ಯುವತಿ ಪ್ರೀತಿಸಿ ವಿವಾಹವಾದ ಘಟನೆ ನಡೆದಿದೆ. ಆ ಜೋಡಿ ಗ್ರಾಮವನ್ನು ತೊರೆದಿದೆ. ಆದರೂ, ಈ ಘಟನೆಯು ಇಡೀ ಗ್ರಾಮದ 2,000 ನಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನಾವು ಈ ಹೊಸ ಕಾನೂನನ್ನು ತಂದಿದ್ದೇವೆ. ನಾವು ಪ್ರೇಮ ವಿವಾಹ ಅಥವಾ ಕಾನೂನನ್ನು ವಿರೋಧಿಸುವುದಿಲ್ಲ. ಆದರೆ, ನಮ್ಮ ಪಂಚಾಯತ್‌ನಲ್ಲಿ ಕುಟುಂಬ ಅಥವಾ ಸಂಬಂಧಿಕರ ಒಪ್ಪಿಗೆಯಿಲ್ಲದೆ ನಾವು ಅದನ್ನು ಅನುಮತಿಸುವುದಿಲ್ಲ ಎಂದು ದಲ್ವೀರ್​ ಹೇಳಿದ್ದಾರೆ.

ನೆರೆಯ ಹಳ್ಳಿಗಳು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದಾರೆ. ಆದರೆ, ಈ ಕ್ರಮವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಟಿಯಾಲದ ಕಾಂಗ್ರೆಸ್ ಸಂಸದ ಧರ್ಮವೀರ ಗಾಂಧಿ ಅವರು ಗ್ರಾಮಸ್ಥರ ನಿರ್ಣಯವನ್ನು ಖಂಡಿಸಿ, ಇದನ್ನು "ತಾಲಿಬಾನಿ ಆದೇಶ" ಎಂದು ಕರೆದರು. ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬ ವಯಸ್ಕರ ಮೂಲಭೂತ ಹಕ್ಕು. ರಾಜ್ಯವು ಮಧ್ಯಪ್ರವೇಶಿಸಿ ಅಂತಹ ದಂಪತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರ ನಿರ್ಣಯದ ಬಗ್ಗೆ ಕೆಲವು ಕಡೆಗಳಿಂದ ಆಕ್ರೋಶ ವ್ಯಕ್ತವಾಗಿದ್ದರು ಸಹ ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಇಂಡಿಯಾ ಟುಡೇ ಜೊತೆ ಹೆಸರು ಬಹಿರಂಗಪಡಿಸದೇ ಮಾತನಾಡಿದ್ದು, ಗ್ರಾಮದ ಮುಖ್ಯಸ್ಥರ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದ ವಿಚಾರದಲ್ಲಿ ನಾವು ನಮ್ಮ ಗ್ರಾಮದ ಮುಖ್ಯಸ್ಥರ ಜೊತೆಗಿದ್ದೇವೆ. ನಾವು ಸಾಗಿಸಬೇಕಾದ ಪರಂಪರೆಯನ್ನು ಹೊಂದಿದ್ದೇವೆ. ಈ ಆಧುನಿಕ ಜಗತ್ತಿನಲ್ಲಿ ನಾವು ನಮ್ಮ ಸಂಬಂಧಗಳು, ನಮ್ಮ ಸಂಸ್ಕೃತಿ ಮತ್ತು ನಮ್ಮ ಹಳ್ಳಿಗಳನ್ನು ಉಳಿಸಬೇಕಾಗಿದೆ ಎಂದು ಓರ್ವ ಗ್ರಾಮಸ್ಥರು ಹೇಳಿದರು.

ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮೊಹಾಲಿಯ ಹೆಚ್ಚುವರಿ ಉಪ ಆಯುಕ್ತ (ಗ್ರಾಮೀಣ) ಸೋನಮ್ ಚೌಧರಿ ಮಾತನಾಡಿದ್ದು, ಗ್ರಾಮಸ್ಥರ ನಿರ್ಣಯ ವಿರುದ್ಧ ಈವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ವ್ಯಕ್ತಿಗಳು ವಯಸ್ಕರಾಗಿದ್ದರೆ, ಅವರು ತಮಗೆ ಇಷ್ಟವಾದವರನ್ನು ಮದುವೆಯಾಗಲು ಕಾನೂನುಬದ್ಧವಾಗಿ ಸ್ವತಂತ್ರರು. ಭವಿಷ್ಯದಲ್ಲಿ ಬರುವ ಯಾವುದೇ ದೂರುಗಳನ್ನು ಕಾನೂನಿನ ಪ್ರಕಾರ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net