

ಚಂಡಿಗಢ್: ಪಂಜಾಬ್ನ ಏಳು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ.
ಏಳೂ ಮಹಾನಗರ ಪಾಲಿಕೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಆಘಾತ ನೀಡಿದೆ.
ಮೋಘಾ, ಹೋಶೈರಪುರ್, ಕಾಪುರ್ತಲಾ, ಅಭೋಹರ್, ಪಠಾಣಕೋಟ್, ಬಟಾಲಾ, ಮತ್ತು ಬಟಿಂಡಾ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಿತು. 53 ವರ್ಷಗಳ ನಂತರ ಕಾಂಗ್ರೆಸ್ ಪುನಃ ಈ ಸಾಧನೆ ಮಾಡಿದೆ. ಮೋಹಾಲಿ ನಗರ ಪಾಲಿಕೆಗೂ ಚುನಾವಣೆ ನಡೆದಿದ್ದೂ ಅದರ ಫಲಿತಾಂಶ ನಾಳೆ ಪ್ರಕಟವಾಗಲಿದೆ.
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪಂಜಾಬ್ನ ಬಹುತೇಕ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಚುನಾವಣೆಯಲ್ಲಿ ಎಸ್ಎಡಿ, ಎಎಪಿ ಹಾಗೂ ಬಿಜೆಪಿ ಕಳಪೆ ಸಾಧನೆ ಮಾಡಿವೆ.
ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಇದು 2022 ರ ಚುನಾವಣೆಯ ಟ್ರೈಲರ್ ಮಾತ್ರ, ಪಿಚ್ಚರ್ ಅಭಿ ಬಾಕಿ ಹೈ ಎಂದು ಹೇಳಿದ್ದಾರೆ.