

ಕರೊನಾ ವೈರಸ್‌ನಿಂದ ಇಡೀ ದೇಶವೇ ಲಾಕೌಟ್ ಆಗಿದೆ. ಇದರಿಂದ ಸಾಕಷ್ಟು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಜನರ ಸಂಕಷ್ಟಗಳನ್ನು ತೀರಿಸುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಹಾರ ನಿಧಿ ಸ್ಥಾಪಿಸಿದ್ದು, ಈಗಾಗಲೇ ಹಲವರು ಆ ಪರಿಹಾರ ನಿಧಿಗೆ ತಮ್ಮದೇ ರೀತಿಯಲ್ಲಿ ದೇಣಿಗೆ ಕೊಟ್ಟಿದ್ದಾರೆ. ಈ ಸಾಲಿಗೆ ಇದೀಗ ನಟ ಪುನೀತ್ ರಾಜಕುಮಾರ್ ಸಹ ಸೇರಿದ್ದಾರೆ.
ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಪುನೀತ್, 50 ಲಕ್ಷದ ಚೆಕ್ ಕೊಟ್ಟಿದ್ದಾರೆ. ಆ ಹಣವನ್ನು ಕಷ್ಟದಲ್ಲಿರುವವರ ನೆರವಿಗೆ ಬಳಸಿಕೊಳ್ಳಬೇಕೆಂದು ಬಯಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಮೊತ್ತ ಕೊಟ್ಟ ಕನ್ನಡದ ಮೊದಲ ನಟ ಎಂದನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ನಟ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್, ಕಾರ್ಮಿಕರಿಗೆ 32 ಲಕ್ಷ ಮತ್ತು ಕಿರುತೆರೆ ಕಾರ್ಮಿಕರಿಗೆ ಐದು ಲಕ್ಷ ರೂಗಳ ಪರಿಹಾರ ನೀಡಿದ್ದರು. ಇದಲ್ಲದೆ ‘ಲೂಸಿಯಾ’ ಪವನ್ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದ್ದರು. 350 ಸಿನಿಮಾ ಕಾರ್ಮಿಕರಿಗೆ ತಲಾ ಎರಡು ಸಾವಿರ ಕೊಟ್ಟಿದ್ದರು. ಇದಲ್ಲದೆ ಸುದೀಪ್, ದರ್ಶನ್, ಜಗ್ಗೇಶ್ ಅಭಿಮಾನಿಗಳು ಬಡವರಿಗೆ ಉಚಿತ ಆಹಾರ ನೀಡುವ ಮೂಲಕ ಸಹಾಯ ಮಾಡುತ್ತಲೇ ಇದ್ದಾರೆ.