

‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಯಾವಾಗಲೂ ಕ್ಲೀನ್ ಶೇವನ್ ಲುಕ್ನಲ್ಲೇ ಕಾಣಿಸಿಕೊಂಡವರು. ಅವರ ಚಿತ್ರಗಳಲ್ಲೂ ನೀವು ಅವರು ಗಡ್ಡ ಬಿಟ್ಟಿದ್ದು ಅಥವಾ ಅಂಟಿಸಿಕೊಂಡಿದ್ದನ್ನು ನೋಡುವುದು ಅಪರೂಪ. ಹೀಗಿದ್ದ ಪುನೀತ್, ಅಪರೂಪಕ್ಕೆಂಬಂತೆ ಗಡ್ಡ ಬಿಟ್ಟಿದ್ದಾರೆ.
ಹೌದು, ಪುನೀತ್ ಲೈಟ್ ಆಗಿ ಗಡ್ಡ ಬಿಟ್ಟಿದ್ವುದಾರೆ. ಆ ಹೊಸ ಲುಕ್ನ ಫೋಟೋವೊಂದನ್ನು ಅವರ ಅಭಿಮಾನಿಗಳು ಟ್ವಿಟರ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹೊಸ ಲುಕ್ ಹೇಗಿದೆ ಎಂದು ಪುನೀತ್ ಅಭಿಮಾನಿಗಳು ಕೇಳಿದ್ದಾರೆ. ಕೆಲವರು ಸೂಪರ್ ಎಂದಿದ್ದಾರೆ. ಇನ್ನೂ ಕೆಲವರು, ‘ನಿಮಗೆ ಸೂಟ್ ಆಗುವುದಿಲ್ಲ, ನೀವು ಕ್ಲೀನ್ ಶೇವನ್ ಆಗಿಯೇ ಬಹಳ ಚೆಂದ’ ಎಂದು ಹೇಳಿದ್ದಾರೆ. ಮತ್ತೂ ಕೆಲವರು, ‘ನೀವು ಹೇಗಿದ್ದರೂ ಚೆಂದ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಷ್ಟಕ್ಕೂ ಪುನೀತ್ ಹೀಗೆ ಗಡ್ಡ ಬಿಡುವುದಕ್ಕೆ ಕಾರಣವೇನು? ಅದೇನು ಹೊಸ ಚಿತ್ರಕ್ಕೆ, ಅವರ ಹೊಸ ಲುಕ್ ಇರಬಹುದಾ? ಎಂಬ ಪ್ರಶ್ನೆ ಬರಬಹುದು. ಬಹುಶಃ ಇದು ಲಾಕ್ಡೌನ್ ಎಫೆಕ್ಟ್ ಎಂದನಿಸುತ್ತದೆ. ಸದ್ಯಕ್ಕೆ ‘ಯುವರತ್ನ’ ಚಿತ್ರವನ್ನು ಬಹುತೇಕ ಮುಗಿಸಿರುವ ಪುನೀತ್, ಆ ಚಿತ್ರದ ಹಾಡೊಂದರ ಶೂಟಿಂಗ್ನಲ್ಲಿ ಪಾಲ್ಗೊಳ್ಳಬೇಕಿದೆ. ಅದಕ್ಕೆ ಇನ್ನೂ ಸ್ವಲ್ಪ ಸಮಯವಿದ್ದು, ಅಷ್ಟರಲ್ಲಿ ಗಡ್ಡ ಬೋಳಿಸುತ್ತಾರೋ ಅಥವಾ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.