

ಗುರುಪುರ: ರಾಜ್ಯದ ಬಹುತೇಕ ಎಲ್ಲ ಕಡಿದಾದ ಬೆಟ್ಟ-ಗುಡ್ಡ ಏರಿ ದಾಖಲೆ ಮಾಡಿರುವ ಹವ್ಯಾಸಿ ಸೈಕಲ್ ಸವಾರ ವಾಮಂಜೂರು ಕೆಲರೈಕೋಡಿಯ ಪುನೀತ್ ಕುಮಾರ್(26) ಈ ಬಾರಿ ಕಾಶ್ಮೀರದ ಲಡಾಕ್‌ನಲ್ಲಿ ನಡೆದ 42 ಕಿ.ಮೀ. ಉದ್ದದ ವಿಶ್ವದ ಅತಿ ಕಠಿಣವಾದ ‘ಲಡಾಕ್ ಮ್ಯಾರಥಾನ್’ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಪುನೀತ್ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡಿದ್ದು, ವರ್ಷಕ್ಕೆ 2 ಬಾರಿ ದೇಶದ ಪ್ರಮುಖ ಸ್ಥಳಗಳಿಗೆ ಸೈಕಲ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ‘ಪರಿಸರ ಉಳಿಸಿ, ಅರಣ್ಯ ಬೆಳೆಸಿ’ ಶೀರ್ಷಿಕೆಯಡಿ ಮಂಗಳೂರಿನಿಂದ ಕೇದಾರನಾಥಕ್ಕೆ(ಕುಡ್ಲ ಟು ಕೇದಾರನಾಥ್) 3 ಸಾವಿರ ಕಿ.ಮೀ. ಸೈಕ್ಲಿಂಗ್ ಕೈಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನಿಂದ ಮಂಗಳೂರಿಗೆ ಸೈಕ್ಲಿಂಗ್ ನಡೆಸಿ ಮತ ಚಲಾಯಿಸಿ ಮರಳಿದ್ದರು.
ಕೊಡಚಾದ್ರಿ, ಕಳಸ, ಕುಮಾರಪರ್ವತ ಹಾಗೂ ರಾಜ್ಯದ ಇತರ ಬಹುತೇಕ ಎಲ್ಲ ಅತಿ ಎತ್ತರ ಹಾಗೂ ಕಠಿಣ ಗುಡ್ಡ-ಪರ್ವತಗಳಲ್ಲಿ ಚಾರಣ ನಡೆಸಿದ್ದಾರೆ. ಬೆಂಗಳೂರಿನಿಂದ ದಿಲ್ಲಿ ಮೂಲಕ ಕಾಶ್ಮೀರದ ಲೇಹ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಪುನೀತ್, ಲಡಾಕ್‌ಗೆ ರಸ್ತೆ ಮೂಲಕ ಸಾಗಿದ್ದಾರೆ. 12ನೇ ವರ್ಷದ ಲಡಾಕ್ ಮ್ಯಾರಥಾನ್‌ನಲ್ಲಿ ದೇಶ-ವಿದೇಶಗಳ 6,600 ಮಂದಿ ಓಟಗಾರರು ಪಾಲ್ಗೊಂಡಿದ್ದು, ವಿಶ್ವದಲ್ಲೇ ಅತಿ ಬೃಹತ್ ಮ್ಯಾರಥಾನ್ ಇದಾಗಿದೆ.