ಪುಲ್ವಾಮಾ ಉಗ್ರದಾಳಿಗೆ ನಾಲ್ಕು ವರ್ಷ: ಇಂದು ಕರಾಳ ದಿನ, ಅಂದು ನಡೆದದ್ದೇನು?

Pulwama
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​​) ಯೋಧರು ತೆರಳುತ್ತಿದ್ದ ವಾಹನಗಳ (ಕಾನ್ವಾಯ್​) ಮೇಲೆ ಪಾಕ್​ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ನಾಲ್ಕು ವರ್ಷ (ಫೆ.14) ತುಂಬಿದ್ದು, ಇದನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರ್​ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ನಮನ ಸಲ್ಲಿಸಲಾಗುತ್ತದೆ. ದಾಳಿ ನಡೆದ ಪುಲ್ವಾಮಾದಲ್ಲಿ ನಿರ್ಮಿಸಲಾಗಿರುವ ಸ್ಮಾರಕಕ್ಕೆ ಸಿಆರ್​ಪಿಎಫ್​​​​​ ಯೋಧರು ಗೌರವ ಸಲ್ಲಿಸಲಿದ್ದಾರೆ.

ಈ ಘೋರ ಹತ್ಯಾಕಾಂಡಕ್ಕೆ ತಾನೇ ಹೊಣೆಯೆಂದು ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮದ್​ (ಜೆಇಎಂ) ಭಯೋತ್ಪಾದಕ ಸಂಘಟನೆ ಹೇಳಿಕೊಂಡರೂ ಪಾಕ್​ ಸರ್ಕಾರ ಇದುವರೆಗೂ ಸಂಚು ರೂಪಿಸಿದವರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಘಟನೆ ನಡೆದ ತರುವಾಯ ಪಾಕ್​ ರಾಯಭಾರಿಯನ್ನು ಕರೆಸಿಕೊಂಡ ಭಾರತ, ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸುವ ಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಉಗ್ರರ ಅಮಾನುಷ ಕೃತ್ಯಕ್ಕೆ ಇಡೀ ದೇಶದಲ್ಲಿ ಆಕ್ರೋಶದ ಅಲೆ ಎದ್ದಿತು.

ನಡೆದದ್ದೇನು?

2019ರ ಫೆ. 14ರ ಮುಂಜಾನೆ ಜಮ್ಮುವಿನಿಂದ 78 ವಾಹನಗಳಲ್ಲಿ 2,547 ಯೋಧರ ಕಾನ್ವಾಯ್​ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀನಗರದ ಕಡೆಗೆ ಹೊರಟಿತ್ತು. ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್​ಗೆ ಸ್ಫೋಟಕ ತುಂಬಿದ್ದ ಕಾರನ್ನು 22 ವರ್ಷದ ಅದಿಲ್​ ಅಹ್ಮದ್​ ದರ್​ ಎಂಬಾತ ಡಿಕ್ಕಿ ಹೊಡೆಸಿ ಸ್ಫೋಟಿಸಿದ, ಇದರಿಂದ 76ನೇ ಬೆಟಾಲಿಯನ್​ನ 40 ಯೋಧರು ಹುತಾತ್ಮರಾದರು. ಸ್ಫೋಟಕ್ಕೆ ಸುಮಾರು 80 ಕೆಜಿ ಸ್ಫೋಟಕ ಬಳಸಲಾಗಿತ್ತು. ಭಾರತದ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್​ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು.

ಪಾಕ್​ ನೆಲಕ್ಕೇ ನುಗ್ಗಿ ಭಯೋತ್ಪಾದಕರ ತಾಣ ಧ್ವಂಸ

ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​-ಎ-ಮೊಹಮ್ಮದ್​ ಸಂಟನೆಯ ಉಗ್ರಗಾಮಿಗಳ ತಾಣಗಳ ಮೇಲೆ ಫೆ. 26ರಂದು ಭಾರತೀಯ ವಾಯುಪಡೆಯು 12 ಫೈಟರ್​ ವಿಮಾನಗಳ ಮೂಲಕ ಬಾಂಬ್​ ದಾಳಿ ನಡೆಸಿತು. ಇದರಿಂದ ಉಗ್ರಗಾಮಿಗಳ ಅನೇಕ ಶಿಬಿರಗಳು ನಿರ್ನಾಮ ಆದವು. ಮರುದಿನ (ಫೆ.27) ಬೆಳಗ್ಗೆ ಪಾಕ್​ ವಿಮಾನಗಳು (ಅಮೆರಿಕದ ಎಫ್​​​​16 ಫೈಟರ್​ ಜೆಟ್​ ಸಹಿತ) ಭಾರತದೊಳಗೆ ನುಗ್ಗಿದವು. ಇದನ್ನು ಹಿಮ್ಮೆಟ್ಟಿಸಲು ಮಿಗ್​-21, ಸುಖೋಯ್​, ಮಿರಾಜ್​ 2000 ವಿಮಾನಗಳು ಮುಂದಾದವು.

ಮಿಗ್​-21 ಬೈಸನ್​ ವಿಮಾನದಲ್ಲಿ ಪಾಕ್​ ವಿಮಾನವನ್ನು ಬೆನ್ನಟ್ಟಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​, ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಅವರ ವಿಮಾನ ಪತನವಾಯಿತು. ಅವರು ಪ್ಯಾರಾಚೂಟ್​ ಮೂಲಕ ಇಳಿದ ಜಾಗ ಪಾಕ್​ ಆಕ್ರಮಿತ ಕಾಶ್ಮೀರ (ಪಿಒಕೆ) ವಾಗಿತ್ತು. ಅಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು 60 ತಾಸಿನ ನಂತರ ಅವರನ್ನು ವಾಪಸು ಕರೆತರುವ ಭಾರತದ ರಾಜತಾಂತ್ರಿಕ ಪ್ರಯತ್ನ ಲಪ್ರದವಾಯಿತು. ತನ್ನ ಧೀರಯೋಧರ ಸಾವಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್​ ನೆಲದೊಳಗೇ ನುಗ್ಗಿ ಸಾಹಸಗೈದಿತು. ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಿದರೂ ಭಾರತ ಇದನ್ನು ಜಾಣ್ಮೆಯ ಕಾರ್ಯತಂತ್ರದಿಂದ ನಿಭಾಯಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net